ವರದಿ: ಅಕ್ಷಯ್ ಕುಮಾರ್, ಸಂಪಾದಕರು, ಪ್ರತಿಕ್ಷಣ
ಒಡಿಶಾದಲ್ಲಿ ಸಂಭವಿಸಿದ ರೈಲು ದುರಂತಕ್ಕೆ 288 ಮಂದಿ ಅಮಾಯಕರು ಜೀವ ಕಳೆದುಕೊಂಡಿರುವ ಬೆನ್ನಲ್ಲೇ ರೈಲ್ವೆ ಸುರಕ್ಷತೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಶ್ನೆಗಳು ಎದ್ದಿವೆ.
ರಾಷ್ಟ್ರೀಯ ರೈಲು ಸಂರಕ್ಷಣಾ ನಿಧಿ:
2017-18ರ ಆರ್ಥಿಕ ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಐದು ವರ್ಷಗಳ ಗುರಿಯೊಂದಿಗೆ ರಾಷ್ಟ್ರೀಯ ರೈಲ್ವೆ ಸಂರಕ್ಷಣಾ ನಿಧಿಯನ್ನು ಪ್ರಾರಂಭಿಸಿತು.
ಈ ಕಾರ್ಯಕ್ರಮದ ಅಡಿಯಲ್ಲಿ ರೈಲ್ವೆ ಸುರಕ್ಷತೆಗಾಗಿಯೇ ಐದು ವರ್ಷದಲ್ಲಿ 1 ಲಕ್ಷ ಕೋಟಿ ರೂಪಾಯಿ ಅನುದಾನ ನೀಡುವ ತೀರ್ಮಾನವನ್ನು ಮಾಡಲಾಯಿತು. ಅಂದರೆ ಪ್ರತಿ ವರ್ಷದ ಬಜೆಟ್ನಲ್ಲೂ ರೈಲ್ವೆ ಸುರಕ್ಷತೆಗಾಗಿ 20 ಸಾವಿರ ಕೋಟಿ ರೂಪಾಯಿ ತೆಗೆದಿಡುವ ನಿರ್ಧಾರ ಮಾಡಲಾಯಿತು.
2017-18ರ ಅಂದಾಜು ಮತ್ತು ಪರಿಷ್ಕೃತ ಬಜೆಟ್ನಲ್ಲಿ ರೈಲ್ವೆ ಸುರಕ್ಷತೆಗಾಗಿಯೇ 20 ಸಾವಿರ ಕೋಟಿ ರೂಪಾಯಿ ತೆಗೆದಿಟ್ಟಿದ್ದಾಗಿ 2018ರ ಮಾರ್ಚ್ 28ರಂದು ರೈಲ್ವೆ ಖಾತೆ ರಾಜ್ಯ ಸಚಿವ ರಾಜೇಶ್ ಗೋಹೈನ್ ಅವರು ಲೋಕಸಭೆಯಲ್ಲಿ ಲಿಖಿತ ಹೇಳಿಕೆ ನೀಡಿದ್ದರು.
ರೈಲ್ವೆ ಸುರಕ್ಷತೆಗೆಂದೇ ಮೀಸಲಾದ ಈ ನಿಧಿಯಲ್ಲಿ ಆರು ರೀತಿಯ ಸುರಕ್ಷತಾ ಕ್ರಮಗಳಲ್ಲಿ ಪ್ರಮುಖ ಮೂರು ಸುರಕ್ಷತಾ ಕಾಮಗಾರಿಗಳನ್ನು ಪಟ್ಟಿ ಮಾಡಲಾಗಿತ್ತು.
1. ಸಿವಿಲ್ ಎಂಜಿನಿಯರಿಂಗ್ ಕಾಮಗಾರಿ – ಹಳಿ ಕಾಮಗಾರಿ, ರೈಲ್ವೆ ಸೇತುವೆಗಳ ನವೀಕರಣ, ರೈಲುಗಳಿಗೆ ಅಲ್ಟ್ರಾಸೌಂಡ್ ಪರೀಕ್ಷಾ ವ್ಯವಸ್ಥೆ,
2. ಲೆವೆಲ್ ಕ್ರಾಸಿಂಗ್ನಲ್ಲಿ ಸುರಕ್ಷತೆ ಕಾಮಗಾರಿ
3. ರೈಲು ಸುರಕ್ಷತೆ ಮತ್ತು ಮುನ್ನೆಚ್ಚರಿಕೆ ವ್ಯವಸ್ಥೆ, ರೈಲುಗಳ ಡಿಕ್ಕಿ ತಪ್ಪಿಸುವ ವ್ಯವಸ್ಥೆ, ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ನಲ್ಲಿ ಹಳೆಯದಾದ ಸಿಗ್ನಲ್ಗಳನ್ನು ಬದಲಿಸುವುದು
2 ವರ್ಷಗಳಲ್ಲಿ 1 ಲಕ್ಷ ಕೋಟಿ ರೂಪಾಯಿ ಬಳಕೆ:
2017ರಲ್ಲಿ ರೈಲ್ವೆ ಸಚಿವರಾಗಿ ಮತ್ತೆ ಜವಾಬ್ದಾರಿ ವಹಿಸಿಕೊಂಡಿದ್ದ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು
ಐದು ವರ್ಷದ ಬದಲಿಗೆ ಕೇವಲ 2 ವರ್ಷದಲ್ಲೇ ರೈಲ್ವೆ ಸುರಕ್ಷತೆಗೆ 1 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡುವುದಾಗಿಯೂ, ರೈಲ್ವೆ ಸುರಕ್ಷತೆಗೆ ಹಣಕಾಸಿನ ಕೊರತೆ ಇಲ್ಲ ಎಂದಿದ್ದರು.
ಘೋಷಣೆಯಷ್ಟೇ, ಅನುದಾನ ಸಿಕ್ಕಿಲ್ಲ:
2017-18ರಲ್ಲಿ ರಾಷ್ಟ್ರೀಯ ರೈಲು ಸಂರಕ್ಷಣಾ ನಿಧಿ ಸ್ಥಾಪನೆಯಾಗಿ ಐದು ವರ್ಷಗಳಲ್ಲಿ ಅಂದರೆ 2022ರ ಆರ್ಥಿಕ ವರ್ಷದ ವೇಳೆಗೆ 1 ಲಕ್ಷ ಕೋಟಿ ರೂಪಾಯಿಯನ್ನು ರೈಲ್ವೆ ಸುರಕ್ಷತೆಗೆ ಖರ್ಚು ಮಾಡಬೇಕಿತ್ತು.
ಆದರೆ ಮಹಾಲೆಕ್ಕ ಪರಿಶೋಧಕರ ಪ್ರಕಾರ ಈ ನಿಧಿಗೆ ರೈಲ್ವೆ ಸಚಿವಾಲಯದಿಂದ ಐದು ವರ್ಷಗಳಲ್ಲಿ ಸಿಕ್ಕಿದ್ದು ಬರೀ 4,225 ಕೋಟಿ ರೂಪಾಯಿಗಳಷ್ಟೇ.
ವರ್ಷ |
ರೈಲ್ವೆ ಸಚಿವಾಲಯ ಕಡ್ಡಾಯವಾಗಿ ಕೊಡಬೇಕಾಗಿದ್ದ ಮೊತ್ತ |
ಕೊಟ್ಟಿದ್ದು |
2017-18 |
5 ಸಾವಿರ ಕೋಟಿ ರೂ. |
0 |
2018-19 |
5 ಸಾವಿರ ಕೋಟಿ ರೂ. |
3,024 |
2019-20 |
5 ಸಾವಿರ ಕೋಟಿ ರೂ. |
201 |
2020-21 |
5 ಸಾವಿರ ಕೋಟಿ ರೂ. |
1,000 |
ಒಟ್ಟು |
20 ಸಾವಿರ ಕೋಟಿ ರೂ, |
4,225 |