ಕೆಆರ್ಎಸ್ ಆಣೆಕಟ್ಟಿನ ಹತ್ತಿರದ ಪ್ರದೇಶವಾದ ಬೇಬಿ ಬೆಟ್ಟ ಸೇರಿದಂತೆ 5 ಕಡೆ ಟ್ರಯಲ್ ಬ್ಲಾಸ್ಟಿಂಗ್ ಮಾಡಲು ಕಾವೇರಿ ನೀರಾವರಿ ನಿಗಮ ನಿರ್ಧರಿಸಿದೆ. ಈ ನಿರ್ಧಾರದ ವಿರುದ್ಧ ಮಂಡ್ಯ ರೈತರು ಸಡಿದೆದ್ದಿದ್ದಾರೆ. ಕೆ.ಆರ್.ಎಸ್ ಡ್ಯಾಂ ನಮ್ಮ ಜೀವನಾಡಿ, ಹೊಡೆದು ಹೋದ್ರೆ ಕಟ್ಟೋದು ಬಾರಿ ಕಷ್ಟ ಎಂದಿರುವ ರೈತರು ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ‘ಗೋ ಬ್ಯಾಕ್ ಚಳುವಳಿ’ ಆರಂಭಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ರಾಜ್ಯ ರೈತ ಸಂಘಟದ ಮಂಡ್ಯ ಜಿಲ್ಲಾಧ್ಯಕ್ಷ ಕೆಂಪೂಗೌಡ ಅವರು, ರೈತರ ವಿರೋಧದ ನಡುವೆ ಬೇಬಿ ಬೆಟ್ಟ ಸೇರಿದಂತೆ 5 ಕಡೆ ಟ್ರಯಲ್ ಬ್ಲಾಸ್ಟಿಂಗ್ ಮಾಡಲಾಗುತ್ತಿದೆ. ಇದರ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ‘ಗೋ ಬ್ಯಾಕ್’ ಚಳವಳಿಗೆ ನಿರ್ಧರಿಸಿದೆ ಎಂದಿದ್ದಾರೆ.
ಪ್ರಕೃತಿ ವಿಕೋಪ ನಿರ್ವಹಣಾ ಮಂಡಳಿ ಕೆಆರ್ಎಸ್ ಸುತ್ತಮುತ್ತ ಗಣಿಗಾರಿಕೆ ಮಾಡದಂತೆ 2018ರಲ್ಲೇ ವರದಿ ಕೊಟ್ಟಿದೆ. ಆ ವರದಿಯಂತೆ ಕೆಆರ್ಎಸ್ ಸುತ್ತ 20 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧವಾಗಿದೆ. ಆದರೆ, ಕಾವೇರಿ ನೀರಾವರಿ ನಿಗಮ ಮುಗಿಬಿದ್ದು ಟ್ರಯಲ್ ಬ್ಲಾಸ್ಟಿಂಗ್ ಗೆ ಮುಂದಾಗಿದೆ. ಹೀಗಾಗಿ ನಾಳೆ ಜಾರ್ಖಂಡ್ ಮೂಲದ ವಿಜ್ಞಾನಿಗಳನ್ನ ಕರೆಸುತ್ತಿದ್ದಾರೆ.
ಜಾರ್ಖಂಡ್ ವಿಜ್ಞಾನಿಗಳು ಗಣಿ ಮಾಲೀಕರ ಪರವೇ ವರದಿ ಕೊಡ್ತಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಡ್ಯಾಂ ಉಳಿವಿಗಾಗಿ ಯೋಚನೆ ಮಾಡಬೇಕು. 2 ಕೋಟಿ ಜನರು ಈ ಜಲಾಶಯದಿಂದ ನೀರು ಕುಡಿಯುತ್ತಿದ್ದಾರೆ. ಇದೇ ಜಲಾಶಯದಿಂದ ಲಕ್ಷಾಂತರ ರೈತರು ಫಸಲು ಬೆಳೆಯುತ್ತಿದ್ದಾರೆ. ಕೆ.ಆರ್.ಎಸ್ ಡ್ಯಾಂ ನಮ್ಮ ಜೀವನಾಡಿ, ಹೊಡೆದು ಹೋದ್ರೆ ಕಟ್ಟೋದು ಬಾರಿ ಕಷ್ಟ. ನಾವು ರಿಯಲ್ ಬ್ಲಾಸ್ಟಿಂಗ್ ನೋಡಿದ್ದೇವೆ, ನಮಗೆ ಟ್ರಯಲ್ ಬ್ಲಾಸ್ಟಿಂಗ್ ಬೇಡ ಎಂದಿದ್ದಾರೆ.
ಟ್ರಯಲ್ ಬ್ಲಾಸ್ಟಿಂಗ್ ವಿರುದ್ದ 2019 ರಲ್ಲಿ ಗೋ ಬ್ಯಾಕ್ ಚಳವಳಿ ಮಾಡಿದ್ದೆವು. ಈ ಬಾರಿಯೂ ಟ್ರಯಲ್ ಬ್ಲಾಸ್ಟಿಂಗ್ ವಿರುದ್ದ ಗೋ ಬ್ಯಾಕ್ ಚಳವಳಿ ಮಾಡ್ತೇವೆ. ಸೋಮವಾರ ಬೆಳಗ್ಗೆ ಕೆ.ಆರ್.ಎಸ್ ಡ್ಯಾಂನ ಮುಖ್ಯದ್ವಾರದಲ್ಲಿ ನೂರಾರು ರೈತರು ಸೇರುತ್ತಾರೆ. ಈ ಚಳುವಳಿಗೆ ಮಂಡ್ಯ ಹಾಗೂ ಮೈಸೂರಿನಿಂದ ರೈತರು, ಪ್ರಗತಿಪರರು ಆಗಮಿಸುತ್ತಿದ್ದಾರೆ. ಕೆಆರ್ಎಸ್ನಿಂದ ಟ್ರಯಲ್ ಬ್ಲಾಸ್ಟಿಂಗ್ ಸ್ಥಳಕ್ಕೆ ಎಲ್ಲಾ ರೈತರು ಬೈಕ್ನಲ್ಲಿ ಹೋಗುತ್ತೇವೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ ಹೇಳಿದ್ದಾರೆ.