ಮಂಗಳೂರು ನಗರದ ಬಜಾಲ್ ಕಟ್ಟಪುಣಿ ಎಂಬಲ್ಲಿ ಲಾರಿ ಹರಿದು ಆರು ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಬುಧವಾರ ಸಂಜೆ ಆರು ಗಂಟೆ ವೇಳೆಗೆ ನಡೆದಿದೆ.
ಬಜಾಲ್ ಜಲ್ಲಿಗುಡ್ಡೆ ಸಮೀಪದ ಕಟ್ಟಪುಣಿಯ ಕೋರ್ದಬ್ಬು ದೈವಸ್ಥಾನದ ರಸ್ತೆಯಲ್ಲಿ ಘಟನೆ ನಡೆದಿದ್ದು, ಬಾಲಕ ಸೈಕಲ್ ನಲ್ಲಿ ಆಡುತ್ತಿದ್ದಾಗ ಟಿಪ್ಪರ್ ಲಾರಿ ಬಾಲಕನ ಮೇಲಿನಿಂದ ಹರಿದಿದೆ.
ಸ್ಥಳೀಯ ನಿವಾಸಿ ಹಿದಾಯತುಲ್ಲಾ ಎಂಬವರ ಪುತ್ರ ಮೊಹಮ್ಮದ್ ಜೀಶನ್ (6) ಮೃತ ಬಾಲಕ.
ಮೊಹಮ್ಮದ್ ಜೀಶನ್ ಮತ್ತು ಇನ್ನೊಬ್ಬ ಬಾಲಕ ಜೊತೆಯಾಗಿ ಅಂಗಡಿಗೆAದು ಬಂದಿದ್ದು ಒಬ್ಬ ಹುಡುಗ ಇಳಿದು ಹೋಗಿದ್ದಾನೆ ಎನ್ನಲಾಗುತ್ತಿದೆ. ಈ ವೇಳೆ ಸೈಕಲ್ ನಲ್ಲಿದ್ದ ಹುಡುಗನಿಗೆ ಟಿಪ್ಪರ್ ಡಿಕ್ಕಿಯಾಗಿದೆ. ಕಟ್ಟಪುಣಿ ರಸ್ತೆ ಕಿರಿದಾದ ರಸ್ತೆಯಾಗಿದ್ದು ಟಿಪ್ಪರ್ ಲಾರಿಯಲ್ಲಿ ಚಾಲಕ ಮಣ್ಣು ಹೇರಿಕೊಂಡು ಫೈಸಲ್ ನಗರಕ್ಕೆ ತೆರಳುತ್ತಿದ್ದ.
ಘಟನೆ ಆಗುತ್ತಲೇ ಜನ ಸೇರಿದ್ದು, ಲಾರಿ ಚಾಲಕ ಅಬುಬಕ್ಕರ್ ಟಿಪ್ಪರ್ ಬಿಟ್ಟು ಪರಾರಿಯಾಗಿದ್ದಾನೆ. ಕಂಕನಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.