ಪಂಜಾಬ್ನಲ್ಲಿ 424 ವಿಐಪಿಗಳಿಗೆ ನೀಡಿದ್ದ ಭದ್ರತೆಯನ್ನು ಆಮ್ಆದ್ಮಿ ಪಕ್ಷದ ಭಗವಂತ್ ಮಾನ್ ಸಿಂಗ್ ನೇತೃತ್ವದ ಸರ್ಕಾರ ವಾಪಾಸ್ ಪಡೆದಿದೆ.
ನಿವೃತ್ತ ಪೊಲೀಸ್ ಅಧಿಕಾರಿಗಳು, ಧಾರ್ಮಿಕ ಮತ್ತು ರಾಜಕೀಯ ಮುಖಂಡರಿಗೆ ನೀಡಲಾಗಿದ್ದ ಭದ್ರತೆಯನ್ನು ಪಂಜಾಬ್ ಸರ್ಕಾರ ಹಿಂಪಡೆದಿದೆ.
ಏಪ್ರಿಲ್ನಲ್ಲಿ ಮಾಜಿ ಸಚಿವರು, ಶಾಸಕರು ಸೇರಿದಂತೆ 184 ಜನರ ಭದ್ರತೆಯನ್ನು ಪಂಜಾಬ್ ಸರ್ಕಾರ ಹಿಂಪಡೆದಿತ್ತು. ಬಳಿಕ ಒಂದು ತಿಂಗಳ ಹಿಂದೆ 122 ಮಾಜಿ ಸಚಿವರು ಮತ್ತು ಶಾಸಕರ ಭದ್ರತೆಯನ್ನು ಹಿಂಪಡೆಯಲಾಗಿತ್ತು.
ಇದೀಗ ಕ್ಯಾಪ್ಟನ್ ಅಮರಿಂದರ್ ಸಿಂಗ್ ಪುತ್ರ ರಾನೀಂದರ್ ಸಿಂಗ್, ಕಾಂಗ್ರೆಸ್ ಶಾಸಕ ಪ್ರತಾಪ್ ಸಿಂಗ್ ಪತ್ನಿ, ಮಾಜಿ ಸಚಿವರಾದ ಮನ್ಪ್ರೀತ್ ಸಿಂಗ್ ಬಾದಲ್, ರಾಜ್ ಕುಮಾರ್ ವರ್ಕಾ, ಭರತ್ ಭೂಷಣ್ ಆಶು, ಮಾಜಿ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಸೇರಿದಂತೆ ಅವರ ಕುಟುಂಬಸ್ಥರಿಗೆ ನೀಡಿದ್ದ ಭದ್ರತೆಯನ್ನು ಹಿಂಪಡೆಯಲಾಗಿದೆ ಎಂದು ತಿಳಿಸಲಾಗಿದೆ.
ಸರ್ಕಾರದ ಈ ಕೆಲಸದಿಂದ ಬರೋಬ್ಬರಿ 400 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಠಾಣೆಗಳಿಗೆ ಮರಳಿದ್ದಾರೆ ಎಂದು ಸಿಎಂ ಭಗವಂತ್ ಮಾನ್ ಸಿಂಗ್ ಹೇಳಿದ್ದಾರೆ.
ಪಂಜಾಬ್ ಸರ್ಕಾರ ಇತ್ತೀಚಿನ ನಡೆಗಳು ಸಾರ್ವಜನಿಕರಿಗೆ ಹತ್ತಿರವಾಗುತ್ತಿವೆ. ಕೆಲವೇ ದಿನಗಳ ಹಿಂದೆ 1 ಪ್ರತಿಶತ ಕಮಿಷನ್ ಕೇಳಿದ್ದರು ಎಂಬ ಕಾರಣದಿಂದ ಆರೋಗ್ಯ ಸಚಿವರನ್ನು ವಜಾ ಮಾಡಿದ್ದ ಸರ್ಕಾರ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿತ್ತು. ಸರ್ಕಾರದ ಈ ನಡೆಗೆ ದೇಶಾದ್ಯಂತ ಪ್ರಶಂಶೆ ವ್ಯಕ್ತವಾಗಿತ್ತು. ಇದೀಗ, ವಿಐಪಿಗಳಿಗೆ ನೀಡಿದ್ದ ಭದ್ರತೆಯನ್ನೂ ಸರ್ಕಾರ ವಾಪಾಸ್ ಪಡೆಯುವ ಮೂಲಕ ಎಲ್ಲರೂ ಸಾಮಾನ್ಯ ನಾಗರಿಕರಂತೆ ಎಂಬುದನ್ನು ತೋರಿಸಿದಂತಾಗಿದೆ.