BREAKING: ಬಾಂಗ್ಲಾ ಏಕದಿನ ತಂಡದ ಯಶಸ್ವಿ ನಾಯಕ ತಮೀಮ್​ ನಿವೃತ್ತಿ ಘೋಷಣೆ – ಏಷ್ಯಾ ಕಪ್​ಗೂ ಮೊದಲೇ ಬಾಂಗ್ಲಾಕ್ಕೆ ಶಾಕ್​

ಅಚ್ಚರಿಯ ಬೆಳವಣಿಗೆಯಲ್ಲಿ ಬಾಂಗ್ಲಾ ದೇಶ ಕ್ರಿಕೆಟ್ ತಂಡದ ನಾಯಕ ತಮೀಮ್​ ಇಕ್ಬಾಲ್​ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಈ ಕ್ಷಣದಿಂದಲೇ ನಿವೃತ್ತಿ ಘೋಷಿಸಿದ್ದಾರೆ.

ಭಾರತದಲ್ಲಿ ನಡೆಯಲಿರುವ ಏಷ್ಯಾ ಕಪ್​ಗೂ ಮೊದಲೇ ಅಚ್ಚರಿಯ ರೀತಿಯಲ್ಲಿ ಇಕ್ಬಾಲ್​ ನಿವೃತ್ತಿ ಘೋಷಿಸಿದ್ದಾರೆ. ನಿನ್ನೆಯಷ್ಟೇ ಅಫ್ಘಾನಿಸ್ತಾನ ವಿರುದ್ಧ ಬಾಂಗ್ಲಾ ದೇಶ ಮೊದಲ ಏಕದಿನ ಪಂದ್ಯದಲ್ಲಿ ಸೋಲು ಅನುಭವಿಸಿತ್ತು.

ಕಿಕ್ಕಿರಿದು ನೆರೆದಿದ್ದ ಮಾಧ್ಯಮದವರ ಸಮ್ಮುಖದಲ್ಲಿ ಕಣ್ಣೀರು ಹಾಕುತ್ತಲೇ ಇಕ್ಬಾಲ್​ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದಾರೆ. ಆಗಸ್ಟ್​ 31ರಿಂದ ಏಷ್ಯಾ ಕಪ್​ ಆರಂಭವಾಗಲಿದ್ದು, ಬಾಂಗ್ಲಾ ದೇಶ ಏಕದಿನ ತಂಡಕ್ಕೆ ಹೊಸ ನಾಯಕನನ್ನು ಘೋಷಿಸಬೇಕಿದೆ.

16 ವರ್ಷದ ಕ್ರಿಕೆಟ್​ ಜೀವನಕ್ಕೆ 34 ವರ್ಷದ ತಮೀಮ್​ ವಿದಾಯ ಹೇಳಿದ್ದಾರೆ. ಕಳೆದ ವರ್ಷ ಟಿ-ಟ್ವೆಂಟಿಯಿಂದಲೂ ನಿವೃತ್ತಿ ಘೋಷಿಸಿದ್ದಾರೆ.

2007ರ ಫೆಬ್ರವರಿಯಲ್ಲಿ ವೆಸ್ಟ್​ಇಂಡೀಸ್​ನಲ್ಲಿ ನಡೆದಿದ್ದ ವಿಶ್ವಕಪ್​ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಭಾರತದ ವಿರುದ್ಧ ಗೆಲುವಿಗೆ ಕಾರಣವಾಗುವ ಮೂಲಕ ಬಾಂಗ್ಲಾ ಕ್ರಿಕೆಟ್​ ತಂಡಕ್ಕೆ ತಮೀಮ್​ ಪಾದಾರ್ಪಣೆ ಮಾಡಿದ್ದರು.

ಏಕದಿನ ಪಂದ್ಯಗಳಲ್ಲಿ 8,313 ರನ್​ ಗಳಿಸಿರುವ ತಮೀಮ್​, 14 ಶತಕ ಸಿಡಿಸಿದ್ದಾರೆ. ಈಗ ಇರುವ ಆಟಗಾರರ ಪೈಕಿ ವಿರಾಟ್​ ಕೊಹ್ಲಿ ಮತ್ತು ರೋಹಿತ್ ಶರ್ಮಾ ಹೊರತುಪಡಿಸಿದರೆ ಏಕದಿನದಲ್ಲಿ ಅತ್ಯಧಿಕ ರನ್​ ಗಳಿಸಿರುವ ಮೂರನೇ ಆಟಗಾರ ತಮೀಮ್​.

ಟೆಸ್ಟ್​ನಲ್ಲಿ 5,134 ರನ್​ ಗಳಿಸಿದ್ದಾರೆ. ತಮೀಮ್​ ನಾಯಕತ್ವದಲ್ಲಿ 37 ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ 21 ಪಂದ್ಯಗಳಲ್ಲಿ ಗೆಲ್ಲುವ ಮೂಲಕ ಮುರ್ಷಫ್​ ಮೊರ್ತಾಜಾ ಅವರಿಗಿಂತಲೂ ಯಶಸ್ವಿ ನಾಯಕ ಎನ್ನಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here