ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ 12ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಪ್ರಾಂಶುಪಾಲರು, ಇಬ್ಬರು ಶಿಕ್ಷಕರು ಸೇರಿ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಲ್ಲಕುರಿಚಿಯಲ್ಲಿ 12ನೇ ತರಗತಿಯ ವಿದ್ಯಾರ್ಥಿಯೊಬ್ಬಳು ತನ್ನ ಹಾಸ್ಟೆಲ್ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದಕ್ಕೆ ಶಿಕ್ಷಕರ ಚಿತ್ರಹಿಂಸೆಯೇ ಕಾರಣ ಎಂದು ಆರೋಪಿಸಿದ ಡೆತ್ನೋಟ್ ಪತ್ತೆಯಾಗಿತ್ತು. ಮರೋಣತ್ತರ ಪರೀಕ್ಷೆಯಲ್ಲೂ ಹಲವು ಗಾಯದ ಗುರುತುಗಳು, ರಕ್ತಸ್ರಾವ ಆಗಿರುವುದು ಕಂಡುಬಂದಿತ್ತು ಎಂದು ಮಾಹಿತಿ ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಶಾಲೆಯ ರಸಾಯನಶಾಸ್ತ್ರ ಶಿಕ್ಷಕಿ ಹರಿಪ್ರಿಯಾ ಹಾಗೂ ಗಣಿತ ಶಿಕ್ಷಕಿ ಕೃತಿಕಾ ಅವರನ್ನು ಬಂಧಿಸಲಾಗಿದೆ. ಇದಕ್ಕೂ ಮುನ್ನ ಶಾಲಾ ಪ್ರಾಂಶುಪಾಲರು, ಕಾರ್ಯದರ್ಶಿ ಸೇರಿದಂತೆ ಮೂವರನ್ನು ಬಂಧಿಸಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಚಿನ್ನ ಸೇಲಂ ಸಮೀಪದ ಕಣಿಯಮೂರ್ನಲ್ಲಿರುವ ವಸತಿ ಶಾಲೆಯ ಹಾಸ್ಟೆಲ್ನಲ್ಲಿ ಬುಧವಾರ, 12ನೇ ತರಗತಿ ಶವವಾಗಿ ಪತ್ತೆಯಾಗಿದ್ದಳು. ಶಾಲೆಯ ಆಡಳಿತಾಧಿಕಾರಿಗಳು ಸಾವಿನ ಕುರಿತು ಮಾಹಿತಿ ನೀಡಿದ ಬಳಿಕ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಲ್ಲಕುರಿಚಿಯ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ರವಾನಿಸಿದ್ದರು. ಶಾಲೆಯ ಶಿಕ್ಷಕರು ತನಗೆ ಚಿತ್ರಹಿಂಸೆ ನೀಡಿದ್ದಾರೆ ಎಂದು ಉಲ್ಲೇಖಿಸಿರುವ ಸೂಸೈಡ್ ನೋಟ್ ಸಹ ಪತ್ತೆಯಾಗಿತ್ತು.
2,000ಕ್ಕೂ ಹೆಚ್ಚಿನ ಪ್ರತಿಭಟನಾಕಾರರು ಶಾಲಾ ಆವರಣದಲ್ಲಿ ಜಮಾಯಿಸಿದ್ದರು. ಪ್ರತಿಭಟನೆ ಕೆಲವೇ ನಿಮಿಷಗಳಲ್ಲಿ ಹಿಂಸಾಚಾರಕ್ಕೆ ತಿರುಗಿತ್ತು. ಪ್ರತಿಭಟನಾಕಾರರು ಶಾಲಾ ಕಟ್ಟಡ, ತರಗತಿ ಕೊಠಡಿಗಳು ಹಾಗೂ ಪ್ರಾಂಶುಪಾಲರ ಕ್ಯಾಬಿನ್ ಅನ್ನು ಧ್ವಂಸಗೊಳಿಸಿದರು. ಶಾಲಾ ಕ್ಯಾಂಪಸ್ನಲ್ಲಿದ್ದ ಬಸ್ಗಳಿಗೆ ಬೆಂಕಿ ಹಚ್ಚಿದರು. ಇದರಿಂದ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಶಾಲೆಯ ಪ್ರಾಂಶುಪಾಲರು ಸೇರಿ ಮೂವರನ್ನು ಬಂಧಿಸಿದ್ದರು. ಇಂದು ಇಬ್ಬರು ಶಿಕ್ಷಕರನ್ನು ಬಂಧಿಸಲಾಗಿದೆ.