ADVERTISEMENT
ಎಸಿಬಿ ಮುಖ್ಯಸ್ಥ ಸೀಮಂತ್ ಕುಮಾರ್ ಸಿಂಗ್ ಬಗ್ಗೆ ಕರ್ನಾಟಕ ಹೈಕೋರ್ಟ್ನ ಏಕಸದಸ್ಯ ಪೀಠದ ನ್ಯಾಯಮೂರ್ತಿ ಹೆಚ್ ಪಿ ಸಂದೇಶ್ ಅವರು ಮಾಡಿದ್ದ ಟಿಪ್ಪಣಿಗಳಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ.
ಎಸಿಬಿ ಸಂಬಂಧ ನ್ಯಾಯಮೂರ್ತಿ ಸಂದೇಶ್ ಅವರು ನೀಡಿದ್ದ ಎಲ್ಲ ಆದೇಶಗಳಿಗೂ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ.
ನ್ಯಾಯಮೂರ್ತಿಗಳು ಮಾಡಿದ ಟಿಪ್ಪಣಿಗೆ ಪ್ರಕರಣಕ್ಕೆ ಸಂಬಂಧಿಸಿದ್ದಲ್ಲ ಮತ್ತು ಪ್ರಕರಣವನ್ನೂ ಮೀರಿ ನ್ಯಾಯಮೂರ್ತಿಗಳು ಟಿಪ್ಪಣಿ ಮಾಡಿದ್ದಾರೆ ಎಂದು ಸುಪ್ರೀಂಕೋರ್ಟ್ ಸಿಜೆಐ ಎನ್ ವಿ ರಮಣ ಅವರಿದ್ದ ಪೀಠ ಹೇಳಿದೆ.
ಜಾಮೀನು ಅರ್ಜಿ ವಿಚಾರಣೆಯ ವೇಳೆ ಪ್ರಕರಣದ ವ್ಯಾಪ್ತಿಯನ್ನು ಮೀರಿ ನ್ಯಾಯಮೂರ್ತಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಸುಪ್ರೀಂಕೋರ್ಟ್ನ ತ್ರಿಸದಸ್ಯ ಪೀಠ ತನ್ನ ತಡೆಯಾಜ್ಞೆ ಆದೇಶದಲ್ಲಿ ಹೇಳಿದೆ.
ಜಾಮೀನು ಅರ್ಜಿ ಸಂಬಂಧ ನಿರ್ಧಾರ ಕೈಗೊಳ್ಳುವಂತೆ ಸುಪ್ರೀಂಕೋರ್ಟ್ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಸಂದೇಶ್ ಅವರ ಪೀಠಕ್ಕೆ ಸೂಚಿಸಿದೆ.
ಬೆಂಗಳೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಲಂಚ ಪ್ರಕರಣ ಸಂಬಂಧ ಎಸಿಬಿ ದಾಳಿ ನಡೆಸಿತ್ತು. ಬೆಂಗಳೂರು ಜಿಲ್ಲಾಧಿಕಾರಿ ಆಗಿದ್ದ ಮಂಜುನಾಥ್ ಮತ್ತು ಇಬ್ಬರು ನೌಕರರನ್ನು ಎಸಿಬಿ ಬಂಧಿಸಿದೆ.
ಈ ಮೂವರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಸಂದೇಶ್ ಅವರು ಎಸಿಬಿಯಲ್ಲಿ ವಸೂಲಿ ಕೇಂದ್ರ ಎಂದು ಟಿಪ್ಪಣಿ ಮಾಡಿದ್ದಲ್ಲದೇ, ಎಸಿಬಿ ಮುಖ್ಯಸ್ಥ ಸೀಮಂತ್ ಕುಮಾರ್ ಸಿಂಗ್ ಓರ್ವ ಕಳಂಕಿತ ಅಧಿಕಾರಿ ಎಂದು ಅಭಿಪ್ರಾಯಪಟ್ಟಿದ್ದರು.
ಅಲ್ಲದೇ ಎಸಿಬಿ ಈ ಹಿಂದಿನ ತನಿಖೆಗಳಲ್ಲಿ ಸಲ್ಲಿಸಿದ್ದ ಅಂತಿಮ ವರದಿಗಳನ್ನು ನೀಡುವಂತೆ ಸೂಚಿಸಿದ್ದರು.
ತಮ್ಮ ಬಗ್ಗೆ ನ್ಯಾಯಮೂರ್ತಿಗಳ ಟಿಪ್ಪಣಿ ವಿರುದ್ಧ ಎಸಿಬಿ ಸೀಮಂತ್ ಕುಮಾರ್ ಸಿಂಗ್ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.
ADVERTISEMENT