ತಮ್ಮ ವರ್ಗಾವಣೆಗೆ ಭ್ರಷ್ಟಾಚಾರ ನಿಗ್ರಹ ದಳದ ಎಡಿಜಿಪಿ ಪ್ರಯತ್ನ ಮಾಡುತ್ತಿದ್ದಾರೆ ಎಂದು ವಿಚಾರಣೆಯ ವೇಳೆಯೇ ಟಿಪ್ಪಣಿ ಮಾಡಿದ್ದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಹೆಚ್ ಪಿ ಸಂದೇಶ್ ಅವರಿಗೆ ವಿಚಾರಣೆಯನ್ನು ಮೂರು ದಿನಗಳವರೆಗೆ ಮುಂದೂಡುವಂತೆ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ಸೂಚಿಸಿದೆ.
ಜುಲೈ 11ರಂದು ಮಾನ್ಯ ನ್ಯಾಯಮೂರ್ತಿಗಳು ನೀಡಿರುವ ಆದೇಶದ ಬಗ್ಗೆ ನಾವು ಪರಿಶೀಲಿಸಬೇಕಿರುವ ಕಾರಣ ಮೂರು ದಿನ ವಿಚಾರಣೆ ಮುಂದೂಡುವಂತೆ ಮನವಿ ಮಾಡುತ್ತಿದ್ದೇವೆ
ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರ ನೇತೃತ್ವದ ತ್ರಿಸದಸ್ಯ ಪೀಠ ಹೇಳಿದೆ.
ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದ್ದ ಎಸಿಬಿ ದಾಳಿಯಲ್ಲಿ ಆರೋಪಿತರಾಗಿರುವವರು ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯ ವೇಳೆ ನ್ಯಾಯಮೂರ್ತಿ ಹೆಚ್ ಪಿ ಸಂದೇಶ್ ಅವರು ಎಸಿಬಿ ಬಗ್ಗೆ ಕೆಂಡಾಮಂಡಲವಾಗಿದ್ದರು.
ಎಸಿಬಿ ಎಡಿಜಿಪಿ ಕುರಿತ ತಮ್ಮ ಟಿಪ್ಪಣಿಗಳ ಬಳಿಕ ತಮ್ಮನ್ನು ವರ್ಗಾವಣೆ ಮಾಡಲು ದೆಹಲಿ ಮೂಲದ ವ್ಯಕ್ತಿಯ ಮೂಲಕ ಎಡಿಜಿಪಿ ಸೀಮಂತ್ಕುಮಾರ್ ಸಿಂಗ್ ಒತ್ತಡ ಹೇರಿದ್ದಾರೆ ಎಂದು ಜುಲೈ 1ರಂದು ಹೈಕೋರ್ಟ್ ನ್ಯಾಯಮೂರ್ತಿಗಳು ತಮಗೆ ಹೇಳಿದ್ದರು ಎಂದು ನಿನ್ನೆ ನೀಡಿದ್ದ ಆದೇಶದಲ್ಲಿ ನ್ಯಾಯಮೂರ್ತಿ ಹೆಚ್ ಪಿ ಸಂದೇಶವನ್ನು ಟಿಪ್ಪಣಿ ಮಾಡಿದ್ದರು.
ತಮ್ಮ ವಿರುದ್ಧ ನ್ಯಾಯಮೂರ್ತಿ ಸಂದೇಶ್ ಅವರು ಮಾಡಿದ್ದ ಟಿಪ್ಪಣಿಯನ್ನು ಪ್ರಶ್ನಿಸಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.