ರಾಜಸ್ಥಾನದಲ್ಲಿ ನೂಪುರ್ ಶರ್ಮಾ ಹೇಳಿಕೆಗೆ ಸಾಮಾಜಿಕ ಜಾಲತಾಣದ ಮೂಲಕ ಬೆಂಬಲ ಸೂಚಿಸಿದ್ದ ವ್ಯಕ್ತಿಯನ್ನು ಶಿರಚ್ಚೇದ ಮಾಡಿ ಹತ್ಯೆ ಮಾಡಲಾಗಿದೆ.
ಇದೀಗ, ನೂಪುರ್ ಶರ್ಮಾ ಅವರಿಗೆ ಸಾಮಾಜಿಕ ಜಾಲತಾಣದ ಮೂಲಕ ಬೆಂಬಲ ಸೂಚಿಸಿದ್ದಾರೆ ಎಂದು ರಾಜಸ್ಥಾನದ ಉದಯ್ಪುರ್ನ ಮಾಲ್ಡಾಸ್ ರಸ್ತೆಯಲ್ಲಿ ಟೈಲರ್ ವೃತ್ತಿನಿರತ ವ್ಯಕ್ತಿಯನ್ನು ಮುಸ್ಲಿಂ ಸಮುದಾಯದ ಇಬ್ಬರು ಯುವಕರು ಶಿರಚ್ಚೇದ ಮಾಡಿ ಹತ್ಯೆ ಮಾಡಿದ್ದಾರೆ.
ಹತ್ಯೆಯಾದ ಹಿಂದು ಯುವಕನನ್ನು ಕನ್ನಯ್ಯ ಲಾಲ್ ಎಂದು ಗುರುತಿಸಲಾಗಿದೆ. ಹತ್ಯೆ ಮಾಡಿದ ಒಬ್ಬನನ್ನು ಮೊಹಮ್ಮದ್ ರಿಯಾಜ್ ಎಂದು ಗುರುತಿಸಲಾಗಿದೆ.
ಈ ಇಬ್ಬರು ಯುವಕರು ಈ ಹಿಂದೆ ವಿಡಿಯೋ ಬಿಡುಗಡೆ ಮಾಡಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಬೆದರಿಕೆಯೊಡ್ಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಉದಯ್ಪುರ ಪೊಲೀಸ್ ವರಿಷ್ಠಾಧಿಕಾರಿಗಳು, ಈ ಹೇಯ ಕೃತ್ಯದ ಬಗ್ಗೆ ಈಗಾಗಲೇ ತನಿಖೆ ಆರಂಭಿಸಲಾಗಿದೆ. ಆರೋಪಿಗಳಲ್ಲಿ ಕೆಲವರನ್ನು ಗುರುತಿಸಲಾಗಿದೆ ಎಂದು ಹೇಳಿದ್ದಾರೆ.
ಈ ಘಟನೆಯನ್ನು ಖಂಡಿಸಿ ಟ್ವೀಟ್ ಮಾಡಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು, ಉದಯ್ಪುರದ ಯುವ ವ್ಯಕ್ತಿಯ ಹೇಯ ಹತ್ಯೆಯನ್ನು ಖಂಡಿಸುತ್ತೇನೆ. ಈ ಪ್ರಕರಣದಲ್ಲಿ ಬಾಗಿಯಾದ ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಎಲ್ಲರೂ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಬೇಕು ಎಂದು ಹೇಳಿದ್ದಾರೆ.
ಕಳೆದ ತಿಂಗಳು ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರು ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರನ್ನು ಅವಹೇಳನ ಮಾಡಿದ್ದಾರೆ ಎಂದು ದೂರು ದಾಖಲಿಸಲಾಗಿತ್ತು. ಅನಂತರ ದೇಶದಲ್ಲಿ ಬೃಹತ್ ಮಟ್ಟದ ಪ್ರತಿಭಟನೆಯೂ ನಡೆದಿತ್ತು. ಈ ಸಂದರ್ಭದಲ್ಲಿ ಒಂದು ಗುಂಪು ನೂಪುರ್ ಶರ್ಮಾ ವಿರೋಧವಾಗಿ ಹಾಗೂ ಮತ್ತೊಂದು ಗುಂಪು ನೂಪುರ್ ಶರ್ಮಾ ಪರವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.