ಅಫ್ಘಾನಿಸ್ತಾನದ ಶಿಕ್ಷಣ ಸಂಸ್ಥೆಯಲ್ಲಿ ಆತ್ಮಾಹುತಿ ದಾಳಿ : 19 ಜನ ಸಾವು

ಅಫ್ಘಾನಿಸ್ತಾನದ (Afghanistan) ಕಾಬೂಲ್‌ನಲ್ಲಿ ಶುಕ್ರವಾರ ಬೆಳಗ್ಗೆ ಶಿಕ್ಷಣ ಕೇಂದ್ರವೊಂದರಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ 19 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಕಾಜ್ ಶಿಕ್ಷಣ ಕೇಂದ್ರದಲ್ಲಿ ಸ್ಫೋಟ ಸಂಭವಿಸಿದೆ ಎಂದು ಕಾಬೂಲ್ ಪೊಲೀಸ್ ವಕ್ತಾರ ಖಾಲಿದ್ ಜದ್ರಾನ್ ತಿಳಿಸಿದ್ದಾರೆ.  ಘಟನಾ ಸ್ಥಳಕ್ಕೆ ಭದ್ರತಾ ಪಡೆಗಳು ತೆರಳಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ ಎಂದು ಜದ್ರಾನ್‌ ಹೇಳಿದ್ದಾರೆ.

ಹಜಾರಾ ನೆರೆಹೊರೆಯಲ್ಲಿರುವ ಕಾಜ್ ಶೈಕ್ಷಣಿಕ ಕೇಂದ್ರವನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ಬಾಂಬರ್‌, ವಿದ್ಯಾರ್ಥಿಗಳ ನಡುವೆ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ ಎಂದು ಟ್ವಿಟರ್ ಪೋಸ್ಟ್‌ನಲ್ಲಿ ಎನ್‌ಜಿಒ ಆಫ್ಘನ್ ಪೀಸ್ ವಾಚ್ ತಿಳಿಸಿದೆ.

ಇದನ್ನೂ ಓದಿ : ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ – 130 ಕ್ಕೂ ಹೆಚ್ಚು ಜನ ಸಾವು

ಕಾಬೂಲ್‌ನ ವಜೀರ್ ಅಕ್ಬರ್ ಖಾನ್ ಪ್ರದೇಶದ ಬಳಿ ಸ್ಫೋಟ ಸಂಭವಿಸಿದ ಕೆಲವು ದಿನಗಳ ನಂತರ ಮತ್ತೊಂದು ಬಾಂಬ್‌ ಸ್ಫೋಟ ನಡೆದಿದೆ. ಕಾಬೂಲ್‌ನಲ್ಲಿರುವ ರಷ್ಯಾದ ರಾಯಭಾರ ಕಚೇರಿಯ ಹೊರಗೆ ಇತ್ತೀಚೆಗೆ ನಡೆದ ಸ್ಫೋಟವನ್ನು ಜಾಗತಿಕ ಮಟ್ಟದಲ್ಲಿ ತೀವ್ರವಾಗಿ ಖಂಡಿಸಲಾಯಿತು.

ಅಮೆರಿಕ ತನ್ನ ಸೈನ್ಯವನ್ನು ವಾಪಸ್‌ ಕರೆಸಿಕೊಂಡ ನಂತರ ಅಫ್ಘಾನಿಸ್ತಾನವನ್ನು (Afghanistan) ತಾಲಿಬಾನ್‌ ವಶಪಡಿಸಿಕೊಂಡಿತು. ಅಫ್ಘಾನ್‌ನಲ್ಲಿ ತಾಲಿಬಾನ್‌ ಆಡಳಿತವು ಒಂದು ವರ್ಷ ಪೂರೈಸಿದೆ. ಈ ಅವಧಿಯಲ್ಲಿ ದೇಶದಲ್ಲಿ ಸರಣಿ ಸ್ಫೋಟಗಳು ಸಂಭವಿಸುತ್ತಿವೆ.

ಇದನ್ನೂ ಓದಿ : ಮಂಗನ ಕೈಲಿ ಮಾಣಿಕ್ಯ : ಅಫ್ಘಾನಿಸ್ತಾನದಲ್ಲಿ ಅಮೇರಿಕಾದ ಹೆಲಿಕಾಪ್ಟರ್ ಪತನ, ಮೂವರು ಸಾವು