ಖ್ಯಾತ ಗಾಯಕ ಶಿವಮೊಗ್ಗ ಸುಬ್ಬಣ್ಣ ಇನ್ನಿಲ್ಲ..

ಕನ್ನಡದ ಸುಗಮ ಸಂಗೀತ (Sugama Sangeeta)ಕ್ಷೇತ್ರದ ಹಿರಿಯ ಹಿನ್ನೆಲೆ ಗಾಯಕ(Playback Singer)ರಲ್ಲಿ ಒಬ್ಬರಾಗಿದ್ದ ಶಿವಮೊಗ್ಗ ಸುಬ್ಬಣ್ಣ(Shivamogga Subbannna) ಇನ್ನಿಲ್ಲ. 83 ವರ್ಷದ ಶಿವಮೊಗ್ಗ ಸುಬ್ಬಣ್ಣ (Shimoga Subbanna)ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ.

ಗುರುವಾರ ಸಂಜೆ ಶಿವಮೊಗ್ಗ ಸುಬ್ಬಣ್ಣ ಅವರಿಗೆ ತೀವ್ರ  ಹೃದಯಾಘಾತ(Heart Attack) ಸಂಭವಿಸಿತ್ತು. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೇ, ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 10.30ರ ಸಂದರ್ಭದಲ್ಲಿ ಕೊನೆಯುಸಿರೆಳೆದಿದ್ದಾರೆ.

ಶಿವಮೊಗ್ಗ ಸುಬ್ಬಣ್ಣ ನಿಧನದಿಂದ ಸುಗಮ ಸಂಗೀತ ಲೋಕ  ಬಡವಾಗಿದೆ. ಹಲವರು ಕಂಬನಿ  ಮಿಡಿದಿದ್ದಾರೆ.

ಶಿವಮೊಗ್ಗ ಸುಬ್ಬಣ್ಣ  ಅವರ ನಿಜ ನಾಮಧೇಯ ಜಿ.ಸುಬ್ರಹ್ಮಣ್ಯಂ. ಗಣೇಶ್ ರಾವ್ ಹಾಗೂ ರಂಗನಾಯಕಮ್ಮ ದಂಪತಿಗೆ ಶಿವಮೊಗ್ಗ ಜಿಲ್ಲೆಯ ನಗರ ಗ್ರಾಮದಲ್ಲಿ 1938ರಲ್ಲಿ ಜನಿಸಿದರು.

ಮನೆಯಲ್ಲಿ ಪ್ರತಿದಿನ ಪೂಜೆ, ಪುರಸ್ಕಾರ, ವೇದ ಮಂತ್ರಗಳ ಝೇಂಕಾರ ಕೇಳಿ ಬೆಳೆದವರು. ಇವರ ತಾತ ಶಾಮಣ್ಣನವರು ಸಂಗೀತದಲ್ಲಿ ಘನ ವಿದ್ವಾಂಸರು. ಅವರ ಬಳಿಯಲ್ಲಿಯೇ ಶಿವಮೊಗ್ಗ  ಸುಬ್ಬಣ್ಣ ತಮ್ಮ ಪ್ರಾಥಮಿಕ ಸಂಗೀತಾಭ್ಯಾಸ ಆರಂಭಿಸಿದರು. ಇವರೊಂದಿಗೆ ಹೆಸರಾಂತ ಗಾಯಕಿ ಕರ್ನಾಟಕದ ಕೋಗಿಲೆ ಬಿ.ಕೆ. ಸುಮಿತ್ರಾ (BK Sumitra)ಅವರೂ ಸೇರಿ ಕೆಲವು ವರ್ಷಗಳ ಕಾಲ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿದರು. ನಂತರ ತಮ್ಮ ವ್ಯಾಸಂಗದ ಕಡೆ ಗಮನ ಹರಿಸಿದ ಸುಬ್ಬಣ್ಣ ಬಿಎ,ಬಿಕಾಂ,ಎಲ್ಎಲ್ ಬಿ ಮುಗಿಸಿ ವಕೀಲ ವೃತ್ತಿ ಆರಂಭಿಸಿದರು. ಬಳಿಕ ನೋಟರಿ(Notary)ಯಾಗಿ ನೇಮಕಗೊಂಡು ಕೆಲವು ವರ್ಷಗಳ ಕಾಲ ಸಂಗೀತದ ಕಡೆ ಮುಖ ಮಾಡಿರಲಿಲ್ಲ. ಆದರೂ, ರಕ್ತಗತವಾಗಿದ್ದ ಸಂಗೀತ ಆಗಾಗ ಇವರನ್ನು ಎಚ್ಚರಿಸಿ ಶಾಲಾ ಸಮಾರಂಭಗಳಲ್ಲಿ ಹಾಡುವಂತೆ ಪ್ರೇರೇಪಿಸುತ್ತಿತ್ತು.

ಮುಂದೆ ಕನ್ನಡ ಗಾಯನ ಕ್ಷೇತ್ರದಲ್ಲಿ ತಮ್ಮನ್ನು ಗುರುತಿಸಿಕೊಂಡ ಸುಬ್ಬಣ್ಣ 1963ರಲ್ಲಿ ಆಕಾಶವಾಣಿಯ ಗಾಯಕರಾಗಿಯೂ ಆಯ್ಕೆಯಾದರು. ಕವಿ ಚಂದ್ರಶೇಖರ ಕಂಬಾರ(Chandrashekhara Kambara)ರ ‘ಕರಿಮಾಯಿ’(Karimaayi) ಮೂಲಕ ಚಿತ್ರರಂಗ ಪ್ರವೇಶಿಸಿದರು.

1979ರಲ್ಲಿ ಅಂದಿನ ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿ ಅವರಿಂದ ರಜತಕಮಲ(RajataKamala) ಪ್ರಶಸ್ತಿ ಸ್ವೀಕರಿಸಿದ ಶಿವಮೊಗ್ಗ ಸುಬ್ಬಣ್ಣ ಯಶಸ್ಸಿನ ಕುದುರೆಯೇರಿ ನಡೆದರು. ಕಾಡು ಕುದುರೆ (Kaadu Kudure)ಚಿತ್ರದ ಕಾಡು ಕುದುರೆ ಹಾಡು ಶಿವಮೊಗ್ಗ ಸುಬ್ಬಣ್ಣ ಅವರ ಖ್ಯಾತಿ ಹೆಚ್ಚಿಸಿತು

ಆಕಾಶವಾಣಿ ಎಂ.ಎಸ್.ಐ.ಎಲ್. ಪ್ರಾಯೋಜಕತ್ವದಲ್ಲಿ ಪ್ರಸಾರ ಮಾಡಿದ ಜನಪ್ರಿಯ ಕಾರ‍್ಯಕ್ರಮದಲ್ಲಿ ‘ಕೋಡಗನ ಕೋಳಿ ನುಂಗಿತ್ತಾ..’, ‘ಅಳಬೇಡಾ ತಂಗಿ ಅಳಬೇಡ…’ ‘ಬಿದ್ದೀಯಬ್ಬೇ ಮುದುಕಿ..’ ಮೊದಲಾದ ಶಿಶುನಾಳ ಷರೀಫರ ಗೀತೆಗಳನ್ನು ಹಾಡಿದ ಸುಬ್ಬಣ್ಣ ಮನೆ ಮಾತಾಗಿದ್ದರು.

ಸುಬ್ಬಣ್ಣ ಅವರ ಸಾಧನೆಯನ್ನು ಮನ್ನಿಸಿ ರಾಜ್ಯ ಸರ್ಕಾರ ಪ್ರತಿಷ್ಠಿತ ಸಂತ ಶಿಶುನಾಳ ಶರೀಫ್ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸಂಗೀತ ಅಕಾಡಮಿಯ ಕರ್ನಾಟಕ ಕಲಾ ತಿಲಕ ಪ್ರಶಸ್ತಿ ನೀಡಿ ಗೌರವಿಸಿದರೆ, ಅಭಿಮಾನಿಗಳು ನೂರಾರು ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಿದ್ದರು.

LEAVE A REPLY

Please enter your comment!
Please enter your name here