ಹುಟ್ಟುಹಬ್ಬದ ಪಾರ್ಟಿಗೆ ಹಣದ ಸಂಗ್ರಹ ವಿಚಾರವಾಗಿ ನಡೆದ ಜಗಳದಲ್ಲಿ ಒಬ್ಬ ವಿದ್ಯಾರ್ಥಿ ಹಾಸ್ಟೆಲ್ನ ಕಟ್ಟಡದ ಮೇಲಿಂದ ಬಿದ್ದು ಸಾವನ್ನಪ್ಪಿದ್ದು ಮತ್ತೊಬ್ಬ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದಾನೆ.
ಪಂಜಾಬ್ನ ರಾಜ್ಯದ ಜಲಂದರ್ನ ಡಿಎವಿ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಹಾಸ್ಟೆಲ್ನಲ್ಲಿ ಈ ದುರ್ಘಟನೆ ನಡೆದಿದೆ.
ಭಾನುವಾರದಂದು ರಾತ್ರಿ ಇಬ್ಬರು ವಿದ್ಯಾರ್ಥಿಗಳು ಹುಟ್ಟುಹಬ್ಬದ ಪಾರ್ಟಿಗೆ ಹಣದ ಸಂಗ್ರಹದ ವಿಚಾರವಾಗಿ ಜಗಳವಾಡಿದ್ದಾರೆ. ಈ ಗಲಾಟೆಯಲ್ಲಿ ಇಬ್ಬರೂ ವಿದ್ಯಾರ್ಥಿಗಳು ಹಾಸ್ಟೆಲ್ ಕಟ್ಟಡದ ಎರಡನೇ ಅಂತಸ್ತಿನಿಂದ ಕೆಳಗೆ ಬಿದ್ದಿದ್ದಾರೆ. ಒಬ್ಬ ವಿದ್ಯಾರ್ಥಿ ಸ್ಥಳದಲ್ಲಿಯೇ ಅಸುನೀಗಿದ್ದು, ಮತ್ತೊಬ್ಬ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದಾನೆ.
ಬಿಹಾರದ ಇಬ್ಬರು ವಿದ್ಯಾರ್ಥಿಗಳು ಜಗಳವಾಡುತ್ತಾ ಹಾಸ್ಟೆಲ್ನ ಕಟ್ಟಡದಿಂದ ಕೆಳಗೆ ಬಿದ್ದಿದ್ದಾರೆ. ಒಬ್ಬ ವಿದ್ಯಾರ್ಥಿ ಸಾವನ್ನಪ್ಪಿದ್ದು, ಮತ್ತೊಬ್ಬ ವಿದ್ಯಾರ್ಥಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಿಎವಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಸಂಜೀವ್ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ವಿದ್ಯಾರ್ಥಿಗಳಿಬ್ಬರ ಜಗಳದ ಬಗ್ಗೆ ಪ್ರಕರಣ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿರುವ ವಿದ್ಯಾರ್ಥಿಯ ಮೇಲೆ ಐಪಿಸಿ ಸೆಕ್ಷನ್ 304 ರ ಅಡಿ ಕೇಸ್ ಹಾಕಲಾಗಿದೆ ಎಂದು ಪಂಜಾಬ್ನ ಹೆಚ್ಚುವರಿ ಡಿಜಿಪಿ ಜಸ್ಕಿರಜಿತ್ ತನೇಜಾ ಅವರು ಹೇಳಿದ್ದಾರೆ.
ಈ ಇಬ್ಬರು ವಿದ್ಯಾರ್ಥಿಗಳು ಬಿಎಸ್ಸಿ ಪದವಿಯ ಅಧ್ಯಯನ ಮಾಡುತ್ತಿದ್ದರು. ಇಬ್ಬರ ತಂದೆ-ತಾಯಿಗಳಿಗೆ ಶಿಕ್ಷಣ ಸಂಸ್ಥೆ ಮಾಹಿತಿ ನೀಡಿದೆ ಎಂದು ತಿಳಿದುಬಂದಿದೆ.