ಸ್ಕೂಲ್ಗೆ ಗಣಿತ ನೋಟ್ಸ್ ತೆಗೆದುಕೊಂಡು ಬಂದಿಲ್ಲ ಅಂತ ವಿದ್ಯಾರ್ಥಿ ಮೇಲೆ ಶಿಕ್ಷಕ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಶಿಕ್ಷಕನಿಂದ ಹೊಡೆತಕ್ಕೆ ಒಳಗಾದ ವಿದ್ಯಾರ್ಥಿ ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಬೆಂಗಳೂರಿನ ಮೂಡಲಪಾಳ್ಯದ ಖಾಸಗಿ ಶಾಲೆ ಬ್ಲೂ ಬೆಲ್ ಪಬ್ಲಿಕ್ ಶಾಲೆಯಲ್ಲಿ ತನ್ಮಯ್ 6ನೇ ತರಗತಿಯಲ್ಲಿ ಓದುತ್ತಿದ್ದಾನೆ. ಕಳೆದ ಶುಕ್ರವಾರ ಈತ ಶಾಲೆಗೆ ಗಣಿತ ನೋಟ್ಸ್ ತೆಗೆದುಕೊಂಡು ಹೋಗಿರಲಿಲ್ಲ. ಇದಕ್ಕೆ ಸಿಟ್ಟಾದ ಗಣಿತ ಶಿಕ್ಷಕ ಮಾದೇಶ್ ತನ್ಮಯ್ಗೆ ಥಳಿಸಿದ್ದಾರೆ. ಶಿಕ್ಷಕನ ಹೊಡೆತಕ್ಕೆ ಕೆನ್ನೆ, ಕಣ್ಣಿಗೆ ಬಲವಾದ ಪೆಟ್ಟು ಬಿದ್ದಿದೆ. ಸದ್ಯ ತನ್ಮಯ್ ವಾಣಿ ವಿಲಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಆರ್ಟಿಇ ಅಡಿಯಲ್ಲಿ ದಾಖಲಾದ ಮಗು ಎಂಬ ಕಾರಣಕ್ಕೆ ಶಿಕ್ಷಕ ಮಗನಿಗೆ ಈ ರೀತಿ ಹೊಡೆದಿದ್ದಾನೆ ಎಂಬ ಆರೋಪ ಹಿನ್ನೆಲೆ ಪ್ರಶ್ನಿಸಲು ಹೋದ ಪೋಷಕರಿಗೆ ಶಾಲೆಯವರು ಉಡಾಫೆ ಉತ್ತರ ನೀಡಿದ್ದಾರೆ. ಅಲ್ಲದೇ ಶಾಲೆಯ ಪ್ರಾಂಶುಪಾಲ ರಾಜೇಶ್ ಪೋಷಕರಿಗೆ ಧಮ್ಕಿ ಹಾಕಿದ್ದಾರೆ. ಈ ಬಗ್ಗೆ ಪೋಲೀಸರಿಗೆ ದೂರು ಕೊಟ್ಟರು ಯಾವುದೇ ಪ್ರಯೋಜನ ಆಗಿಲ್ಲ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ.
ಇದೀಗ ಶಾಲೆಯ ಪ್ರಾಂಶುಪಾಲರು ಘಟನೆ ಬಗ್ಗೆ ಕ್ಷಮೆ ಕೇಳಿದ್ದಾರೆ. ಮಗುವಿನ ಸಂಪೂರ್ಣ ಚಿಕಿತ್ಸೆ ವೆಚ್ಚ ಭರಿಸುವ ಭರವಸೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.