ಬೆಳ್ತಂಗಡಿಯಲ್ಲಿರುವ ಶ್ರೀ ಗುರುದೇವ ಕಾಲೇಜು ವಿರುದ್ಧ ಫೇಸ್ ಬುಕ್ ನಲ್ಲಿ ಅಪಪ್ರಚಾರ ಮಾಡುತ್ತಿರುವ `ಗರುಡ ಹಿಂದೂ’ ಹೆಸರಲ್ಲಿರುವ ಫೇಸ್ಬುಕ್ ಪೇಕ್ ವಿರುದ್ಧ ಕ್ರಮಕೈಗೊಳ್ಳುವಂತೆ ಕಾಲೇಜು ಪ್ರಾಂಶುಪಾಲೆ ಡಾ ಸವಿತಾ ಅವರು ದೂರು ನೀಡಿದ್ದಾರೆ.
ಬೆಳ್ತಂಗಡಿ ಠಾಣೆ ಉಪ ನಿರೀಕ್ಷಕರಿಗೆ ಮೇ 23ರಂದು ದೂರು ನೀಡಿದ್ದಾರೆ.
`ಗುರುದೇವ ಕಾಲೇಜು ಬೆಳ್ತಂಗಡಿ ಇದ ನೇತೃತ್ವದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾನರ್ಪ ಕೋಡಿಯಾಬೈಲು ಇಲ್ಲಿ ಎನ್ ಎಸ್ ಎಸ್ ಶಿಬಿರ ನಡೆಯುತ್ತಿದ್ದು, ಶಿಬಿರಾರ್ಥಿಗಳು ಗ್ರಾಮದ ಸ್ಥಳೀಯ ಪ್ರಾರ್ಥನಾ ಮಂದಿರಗಳಿಗೆ ಭೇಟಿ ನೀಡಿರುತ್ತಾರೆ. ಆದರೆ ದರ್ಗಾವೊಂದಕ್ಕೆ ಭೇಟಿ ನೀಡಿ ಅದರ ಆವರಣದಲ್ಲಿ ಶಿಬಿರಾರ್ಥಿಗಳು ಮತ್ತು ಶಿಬಿರಾಧಿಕಾರಿಗಳು ತೆಗೆದಿರುವ ಫೋಟೋವನ್ನು ಗರುಡ ಹಿಂದೂ ಎಂಬ ಫೇಸ್ಬುಕ್ ಖಾತೆಯ ಅಡ್ಮಿನ್ ದುರುಪಯೋಗಪಡಿಸಿಕೊಂಡು ಶ್ರೀಗುರುದೇವ ಕಾಲೇಜಿನ ಬಗ್ಗೆ ಕೋಮು ಭಾವನೆ ಕೆರಳಿಸುವ ರೀತಿಯಲ್ಲಿ ಅಪಪ್ರಚಾರ ಮಾಡಿರುತ್ತಾರೆ ಹಾಗೂ ಸಂಸ್ಥೆಯ ಅಧ್ಯಕ್ಷರು ಮತ್ತು ನಮ್ಮ ಕಾಲೇಜಿನ ಬಗ್ಗೆ ತೇಜೋವಧೆಗೆ ಯತ್ನಿಸಿರುತ್ತಾರೆ.’
`ಈಗಾಗಲೇ ವಾಟ್ಸಾಪ್ ಮತ್ತು ಫೇಸ್ಬುಕ್ಗಳಲ್ಲಿ ಸಂದೇಶವನ್ನು ಹರಿಯಬಿಡಲಾಗಿದ್ದು, ಗರುಡ ಹಿಂದೂ ಫೇಸ್ಬುಕ್ ಖಾತೆಯ ಮೂಲವನ್ನು ಪತ್ತೆ ಹಚ್ಚಿ ಅದರ ಅಡ್ಮಿನ್ ಮೇಲೆ ಕಾನೂನು ಕ್ರಮಕೈಗೊಳ್ಳಬೇಕೆಂದು’ ಪ್ರಾಂಶುಪಾಲರು ದೂರಿನಲ್ಲಿ ಮನವಿ ಮಾಡಿದ್ದಾರೆ.