ಬಡವರು,ಸಾಮಾನ್ಯರು, ವಲಸೆ ಕಾರ್ಮಿಕರು,ಮಧ್ಯಮವರ್ಗದ ವರ್ಗದ ಜನರು ರೈಲಿನಲ್ಲಿ ಪಯಣಿಸುವ ಜನರ್,ಸ್ಲೀಪರ್ ಕ್ಲಾಸ್ ಬೋಗಿಗಳ ವಿಚಾರದಲ್ಲಿ ರೈಲ್ವೇ ಇಲಾಖೆ ನಿರ್ಲಕ್ಷ್ಯ ವಹಿಸುತ್ತಿದೆ. ಪ್ರಯಾಣಿಕರು ಹೆಚ್ಚಾಗಿ ಓಡಾಡುವ ರೈಲುಗಳಲ್ಲಿಯೇ ಎಸಿ ಬೋಗಿಗಳನ್ನು ಸದ್ದಿಲ್ಲದೇ ಹೆಚ್ಚಿಸುತ್ತಿದೆ.ಜನರಲ್ ಬೋಗಿಗಳನ್ನು ಕೇವಲ ಒಂದು, ಎರಡಕ್ಕೆ ಇಳಿಸುತ್ತಿದೆ. ಸ್ಲೀಪರ್ ಬೋಗಿಗಳನ್ನು ಗಣನೀಯವಾಗಿ ಇಳಿಕೆ ಮಾಡುತ್ತಿದೆ. ಇದು ದೂರ ಪ್ರಯಾಣಿಸುವವರಿಗೆ ನರಕವಾಗಿ ಪರಿಣಮಿಸಿದೆ. ಇದೇಕೆ ಹೀಗೆ ಎಂದು ಪ್ರಶ್ನೆ ಮಾಡಿದರೇ, ನಮ್ಮ ಕೈಯಲ್ಲಿ ಏನು ಇಲ್ಲ. ಮೇಲಾಧಿಕಾರಿಗಳ ಆದೇಶ ಪಾಲಿಸುವುದಷ್ಟೇ ನಮ್ಮ ಕೆಲಸ ಎಂದು ಅಧಿಕಾರಿಗಳು ಕೈ ಚೆಲ್ಲುತ್ತಾರೆ.
ಇತ್ತೀಚಿನ ದಿನಗಳಲ್ಲಿ ಮೇಲ್, ಎಕ್ಸ್ಪ್ರೆಸ್ ರೈಲುಗಳ ಜನರಲ್ ಬೋಗಿಗಳಲ್ಲಿ ಪ್ರಯಾಣಿಸುವುದು ಪ್ರತ್ಯಕ್ಷ ನರಕವಾಗಿ ಬದಲಾಗಿದೆ. ಹೆಚ್ಚು ಕಡಿಮೆ ಎಲ್ಲಾ ರೈಲುಗಳಲ್ಲಿ ಜನರಲ್ ಬೋಗಿಗಳ ಸಂಖ್ಯೆಯನ್ನಯ ಒಂದು-ಎರಡಕ್ಕೆ ಇಳಿಸಲಾಗಿದೆ ಇವುಗಳಲ್ಲಿ ಕಾಲಿಡಲು ಸಹ ಜಾಗ ಇರುವುದಿಲ್ಲ. ಅಷ್ಟು ರಷ್ ಇರುತ್ತದೆ. ಸ್ಥಳ ಇಲ್ಲದೇ ಪ್ರಯಾಣಿಕರು ಟಾಯ್ಲೆಟ್ನಲ್ಲಿ ನಿಂತು ಪಯಣಿಸುವ ದುಸ್ಥಿತಿ ಇದೆ.
ಅನೇಕ ರೈಲುಗಳಲ್ಲಿ ಸ್ಲೀಪರ್ ಕ್ಲಾಸ್ ಬೋಗಿಗಳಿಗಿಂತ ಎಸಿ ಕೋಚ್ ಬೋಗಿಗಳ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿದೆ. ಇದರಿಂದ ಸ್ಲೀಪರ್ ಬೆರ್ತ್ ಸಿಗುವುದೇ ಕಷ್ಟವಾಗಿ ಪರಿಣಮಿಸಿದೆ. ಹಲವು ಎಕ್ಸ್ಪ್ರೆಸ್ ರೈಲುಗಳಲ್ಲಿ ನಿರೀಕ್ಷಣಾ ಪಟ್ಟಿ 100-150ರ ನಡುವೆ ಇರುತ್ತದೆ. ಬೋಗಿಗಳನ್ನು ತಗ್ಗಿಸಿದ ಕಾರಣ ರಿಸರ್ವೇಷನ್ ಫೈನಲ್ ಆಗದೇ, ನಿರೀಕ್ಷಣಾ ಪಟ್ಟಿಯಲ್ಲಿಯೇ ಇದ್ದು ಸಂಚರಿಸುವವರ ಸಂಖ್ಯೆ ವಿಪರೀತವಾಗಿ ಹೆಚ್ಚುತ್ತಿದೆ. ಸ್ಲೀಪರ್ ಬೋಗಿಗಳು ಕೂಡ ಒಂದರ್ಥದಲ್ಲಿ ಜನರಲ್ ಬೋಗಿಗಳಾಗಿ ಬದಲಾದಂತೆ ಕಾಣಿಸುತ್ತಿವೆ.
ಸ್ಲೀಪರ್ ಬೆರ್ತ್ ಸಿಗದೇ ಥರ್ಡ್ ಎಸಿಗೆ ಹೆಚ್ಚು ಮೊತ್ತ ತೆರುವ ಸಾಮರ್ಥ್ಯ ಇಲ್ಲದೇ ತುಂಬಾ ಮಂದಿ ತೊಂದರೆ ಅನುಭವಿಸುತ್ತಿದ್ದಾರೆ. ಉದಾಹರಣೆಗೆ ವಿಶಾಖಪಟ್ಟಣದಿಂದ ಹೈದರಾಬಾದ್ಗೆ ಗೋದಾವರಿ ಎಕ್ಸ್ಪ್ರೆಸ್ನಲ್ಲಿ ಸ್ಲೀಪರ್ ಬೆರ್ತ್ ಗೆ 415 ರೂಪಾಯಿ ಇದೆ. ಅದೇ, ಥರ್ಡ್ ಎಸಿ ದರ 1090 ರೂ., ಸೆಕೆಂಡ್ ಎಸಿ 1535 ರೂಪಾಯಿ, ಫಸ್ಟ್ ಕ್ಲಾಸ್ ಎಸಿ ದರ 2565 ರೂಪಾಯಿ ಇದೆ. ತಿರುಮಲ ಎಕ್ಸ್ಪ್ರೆಸ್ನಲ್ಲಿ ವಿಜಯವಾಡದಿಂದ ತಿರುಪತಿಗೆ ಸ್ಲೀಪರ್ ಬೆರ್ತ್ಗೆ 245 ರೂಪಾಯಿ ಇದ್ರೆ, ಅದೆ ಥರ್ಡ್ ಎಸಿಗೆ 660 ರೂಪಾಯಿ ಇದೆ.
ಬೆಂಗಳೂರಿನಿಂದ ಭುವನೇಶ್ವರಕ್ಕೆ ತೆರಳುವ ಪ್ರಶಾಂತಿ ಎಕ್ಸ್ಪ್ರೆಸ್ನಲ್ಲಿ ಒಂದೊಮ್ಮೆ ಥರ್ಡ್ ಎಸಿ ಬೋಗಿಗಳ ಸಂಖ್ಯೆ ಇದ್ದಿದ್ದು ಮೂರು. ಆದ್ರೆ, ಇವುಗಳ ಸಂಖ್ಯೆಯನ್ನೀಗ ಆರಕ್ಕೆ ಹೆಚ್ಚಿಸಲಾಗಿದೆ. ಈ ಹಿಂದೆ 9-10 ಇದ್ದ ಸ್ಲೀಪರ್ ಬೋಗಿಗಳನ್ನು ಈಗ ಆರಕ್ಕೆ ಇಳಿಸಲಾಗಿದೆ.
ಹೌರಾ-ಚೆನ್ನೈ ಮೇಲ್ನಲ್ಲಿ ಸ್ಲೀಪರ್ ಬೋಗಿಗಳ ಸಂಖ್ಯೆಯನ್ನು 12ರಿಂದ ಐದಕ್ಕೆ ಇಳಿಸಲಾಗಿದೆ. ಥರ್ಡ್ ಎಸಿ ಬೋಗಿಗಳನ್ನು 9ಕ್ಕೆ ಹೆಚ್ಚಿಸಲಾಗಿದೆ.
ಧನಾಬಾದ್- ಅಲಪ್ಪುಜಾ ಎಕ್ಸ್ಪ್ರೆಸ್ನಲ್ಲಿ ಸ್ಲೀಪರ್ ಬೋಗಿಗಳ ಸಂಖ್ಯೆ ಐದಕ್ಕೆ ಇಳಿದರೇ, ಥರ್ಡ್ ಎಸಿಗಳನ್ನು ಆರು, ಸೆಕೆಂಡ್ ಎಸಿ ಬೋಗಿಗಳನ್ನು 4 ಹೆಚ್ಚಿಸಲಾಗಿದೆ.
ವಿಶಾಖಪಟ್ಟಣ-ಹೈದರಾಬಾದ್ ನಡುವೆ ಸಂಚರಿಸುವ ಗೋದಾವರಿ ಎಕ್ಸ್ಪ್ರೆಸ್ನಲ್ಲಿ ಈ ಹಿಂದೆ ಸ್ಲೀಪರ್ ಬೋಗಿಗಳ ಸಂಖ್ಯೆ 12ರವರೆಗೂ ಇದ್ದವು. ಪ್ರಯಾಣಿಕರ ರಷ್ ಅನ್ನು ಆಧಾರವಾಗಿಸಿಕೊಂಡು ಹೆಚ್ಚುವರಿಯಾಗಿ ಒಂದನ್ನೋ, ಎರಡನ್ನೋ ಜೋಡಿಸುತ್ತಿದ್ದರು. ಆದರೆ, ಈಗ ಅವುಗಳ ಸಂಖ್ಯೆಯನ್ನು ಏಳಕ್ಕೆ ಇಳಿಸಲಾಗಿದೆ. ಥರ್ಡ್ ಎಸಿ ಬೋಗಿಗಳನ್ನು ನಾಲ್ಕರಿಂದ ಏಳಕ್ಕೆ ಹೆಚ್ಚಿಸಲಾಗಿದೆ.
ರೈಲುಗಳಲ್ಲಿ AC ಬೋಗಿಗಳ ಹೆಚ್ಚಳ -Sleeper, General ಬೋಗಿಗಳ ಗಣನೀಯ ಕಡಿತ -ಬಡ, ಮಧ್ಯಮ ವರ್ಗಕ್ಕೆ ಹೊಡೆತ