ಸೈನ ನೆಹ್ವಾಲ್ ಟ್ವೀಟ್​ಗೆ ಅಶ್ಲೀಲ ಪ್ರತಿಕ್ರಿಯೆ : ಕ್ಷಮೆ ಕೇಳಿದ ನಟ ಸಿದ್ದಾರ್ಥ್

ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಮಾಡಿದ ಟ್ವೀಟ್‌ಗೆ ಅಸಭ್ಯವಗಿ ಪ್ರತಿಕ್ರಿಯೆ ನೀಡಿದ್ದ ತಮಿಳಿನ ಖ್ಯಾತ ನಟ ಸಿದ್ದಾರ್ಥ್ ಕ್ಷಮೆ ಯಾಚಿಸಿದ್ದಾರೆ.

ಟ್ವಿಟರ್ ನಲ್ಲಿ ಕ್ಷಮೆಯಾಚನೆ ಪತ್ರ ಬರೆದು ಹಂಚಿಕೊಂಡಿರುವ ಅವರು ಪತ್ರದಲ್ಲಿ, ಡಿಯರ್ ಸೈನಾ, ಕೆಲವು ದಿನಗಳ ಹಿಂದೆ ನಿಮ್ಮ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ ನಾನು ಮಾಡಿದ ಅಸಭ್ಯ ಹಾಸ್ಯಕ್ಕಾಗಿ ನಾನು ನಿಮ್ಮಲ್ಲಿ ಕ್ಷಮೆಯಾಚಿಸಲು ಬಯಸುತ್ತೇನೆ. ನಾನು ನಿಮ್ಮೊಂದಿಗೆ ಅನೇಕ ವಿಷಯಗಳಲ್ಲಿ ಭಿನ್ನಾಭಿಪ್ರಾಯ ಹೊಂದಿರಬಹುದು. ಆದರೆ, ನಿಮ್ಮ ಟ್ವೀಟ್‌ಗೆ ನಾನು ಪ್ರತಿಕ್ರಿಯಿಸಿದ ರೀತಿ ಸಮರ್ಥನೀಯವಲ್ಲ ಎಂದಿದ್ದಾರೆ.

ನನ್ನ ಟ್ವೀಟ್‌ನ ಉದ್ದೇಶ ಹಾಸ್ಯವಾಗಿತ್ತೇ ಹೊರತು ಅನೇಕರು ಆರೋಪಿಸುತ್ತಿರುವ ರೀತಿಯಲ್ಲಿ ಯಾವುದೇ ದುರುದ್ದೇಶಪೂರಿತ ಉದ್ದೇಶವಿರಲಿಲ್ಲ. ನಾನು ಕಟ್ಟಾ ಸ್ತ್ರೀವಾದಿ ಮಿತ್ರ ಮತ್ತು ನನ್ನ ಟ್ವೀಟ್‌ನಲ್ಲಿ ಯಾವುದೇ ಲಿಂಗವನ್ನು ಉದ್ದೇಶಿಸಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇನೆ. ಒಬ್ಬ ಮಹಿಳೆ ಎಂದು ನಿಮ್ಮ ಮೇಲೆ ದಾಳಿ ಮಾಡುವ ಉದ್ದೇಶವಿರಲಿಲ್ಲ. ನೀವು ನನ್ನ ಪತ್ರವನ್ನು ಸ್ವೀಕರಿಸುತ್ತೀರಿ ಎಂದು ನಾನು ಭಾವಿಸುತ್ತೇನೆ. ನೀವು ಯಾವಾಗಲೂ ನನ್ನ ಚಾಂಪಿಯನ್ ಆಗಿರುತ್ತೀರಿ, ಪ್ರಾಮಾಣಿಕವಾಗಿ, ಸಿದ್ಧಾರ್ಥ್ ಎಂದು ಪತ್ರದಲ್ಲಿ ಬರೆದಿದ್ದಾರೆ.

ಸೈನಾ ನೆಹ್ವಾಲ್ ಅವರ ಟ್ವೀಟ್​ಗೆ ಅಸಭ್ಯ ಪ್ರತಿಕ್ರಿಯೆ ನೀಡಿದ್ದ ಸಿದ್ದಾರ್ಥ್ ಟ್ವೀಟ್​ಗೆ ನೆಟ್ಟಿಗರಿಂದ ತೀವ್ರ ಟೀಕೆ ವ್ಯಕ್ತವಾದ ಬಳಿಕ ನಟ ಸಿದ್ದಾರ್ಥ್ ಅವರು ಸೈನಾ ನೆಹ್ವಾಲ್ ಕ್ಷಮೆಯಾಚಿಸಿದ್ದಾರೆ.

ಜನವರಿ 5 ರಂದು ಪಂಜಾಬ್‌ಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದ ವೇಳೆ ಸಂಭವಿಸಿದ ಭದ್ರತಾ ಲೋಪದ ಬಗ್ಗೆ ಸೈನಾ ನೆಹ್ವಾಲ್ ಟ್ವೀಟ್ ಮಾಡಿದ್ದರು. ಯಾವುದೇ ರಾಷ್ಟ್ರವು ತನ್ನ ಪ್ರಧಾನಿಯ ಭದ್ರತೆಗೆ ಧಕ್ಕೆಯಾದರೆ ತಾನು ಸುರಕ್ಷಿತ ಎಂದು ಹೇಳಿಕೊಳ್ಳುವುದಿಲ್ಲ. ಪ್ರಬಲವಾದ ಪದಗಳಲ್ಲಿ, ಅರಾಜಕತಾವಾದಿಗಳ ಹೇಡಿತನದ ದಾಳಿಯನ್ನು ನಾನು ಖಂಡಿಸುತ್ತೇನೆ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಸಿದ್ಧಾರ್ಥ್ ಅಸಭ್ಯ ಹಾಸ್ಯದ ಟ್ವೀಟ್ ಮಾಡಿದ್ದರು.

LEAVE A REPLY

Please enter your comment!
Please enter your name here