ಸಿಎಂ ಸಿದ್ದರಾಮಯ್ಯ ಸಂಪುಟದ ಹೊಸ ಸಚಿವರಾಗಿ 24 ಮಂದಿ ಶಾಸಕರು ಇವತ್ತು ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಹೊಸ ಸಚಿವರಿಗೆ ಪ್ರತಿಜ್ಞಾವಿಧಿಸಿ ಬೋಧಿಸಿದ್ದಾರೆ.
ಈ ಮೂಲಕ ಸಿದ್ದರಾಮಯ್ಯ ಸರ್ಕಾರದ ಪೂರ್ಣ ಸಂಪುಟ ಅಸ್ತಿತ್ವಕ್ಕೆ ಬಂದಿದೆ. ಮೇ 20ರಂದು ಸಿಎಂ ಆಗಿ ಸಿದ್ದರಾಮಯ್ಯ ಮತ್ತು ಡಿಸಿಎಂ ಆಗಿ ಡಿಕೆಶಿವಕುಮಾರ್ ಮತ್ತು ಉಳಿದ 8 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು.
ಸಿಎಂ ಸಿದ್ದರಾಮಯ್ಯ ಒಳಗೊಂಡಂತೆ ಕಾಂಗ್ರೆಸ್ ಸರ್ಕಾರ ಈಗ 34 ಸಚಿವರೊಂದಿಗೆ ಭರ್ತಿ ಆಗಿದೆ.
ವಿಧಾನಸೌಧದಲ್ಲಿ ಸಚಿವ ಸಂಪುಟದ ಅನೌಪಚಾರಿಕ ಸಭೆಯ ನಂತರ ಮಾಧ್ಯಮದವರೊಂದಿಗೆ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿದರು.
ಹೊಸ ಮತ್ತು ಹಳೆ ಮುಖಗಳ ಸಮ್ಮಿಶ್ರಣ:
ರಾಜ್ಯದಲ್ಲಿ ಪೂರ್ಣ ಪ್ರಮಾಣದ ಸಚಿವ ಸಂಪುಟ ರಚಿಸಲಾಗಿದೆ. ಮುಖ್ಯಮಂತ್ರಿ ಹೊರತುಪಡಿಸಿ, 33 ಸ್ಥಾನಗಳನ್ನೂ ಭರ್ತಿ ಮಾಡಲಾಗಿದೆ. ಖಾತೆ ಹಂಚಿಕೆ ಇವತ್ತು ಅಥವಾ ನಾಳೆ ಮಾಡಲಾಗುವುದು ಎಂದು ತಿಳಿಸಿದರು.
ಸಚಿವ ಸಂಪುಟದ ಸ್ವರೂಪದ ಕುರಿತು ವಿವರಿಸಿದ ಮುಖ್ಯಮಂತ್ರಿಗಳು, ಸಚಿವ ಸಂಪುಟವು ಹೊಸ ಹಾಗೂ ಹಳೆ ಮುಖಗಳ ಸಮ್ಮಿಶ್ರಣವಾಗಿದೆ. ಮೊದಲ ಬಾರಿ ಗೆದ್ದವರನ್ನು ಮಂತ್ರಿ ಮಾಡಿಲ್ಲ ಎಂದರು.
ಆಡಳಿತಕ್ಕೆ ಹೊಸ ರೂಪ:
ಸರ್ಕಾರ ನಾವು ಕೊಟ್ಟಿರುವ ಭರವಸೆ ಈಡೇರಿಸಬೇಕು. ಜನ ಹೊಸ ಬದಲಾವಣೆ ಬಯಸಿದ್ದಾರೆ. ಅದರಿಂದ ಆಡಳಿತಕ್ಕೆ ಹೊಸ ರೂಪ ಕೊಡುವ ದೃಷ್ಟಿಯಿಂದ ಈ ಸಚಿವರ ಸಂಪುಟ ರಚಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಗ್ಯಾರಂಟಿ ಸಂಬಂಧ ವಿವರ ಸಲ್ಲಿಕೆಗೆ ಸೂಚನೆ:
ವಿರೋಧ ಪಕ್ಷಗಳು ತಾವು ಕೊಟ್ಟ ವಚನ ಈಡೇರಿಸಿಲ್ಲ. ನಾವು ಹಿಂದೆಯೂ ನಮ್ಮ ವಚನ ಈಡೇರಿಸಿದ್ದೇವೆ. ಈಗಲೂ ಈಡೇರಿಸುತ್ತೇವೆ. ಐದು ಗ್ಯಾರಂಟಿಗಳ ಕುರಿತು ಮುಂದಿನ ಸಚಿವ ಸಂಪುಟದಲ್ಲಿ ವಿವರಗಳನ್ನು ಮಂಡಿಸಲು ಸೂಚಿಸಲಾಗಿದೆ. ಈ ಕುರಿತು ಚರ್ಚಿಸಿ ಅನುಮೋದನೆ ನೀಡಿ ಶೀಘ್ರವೇ ಅವುಗಳನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದರು.
ಮೊದಲು ಗೆದ್ದವರನ್ನು ಮಂತ್ರಿ ಮಾಡಿಲ್ಲ:
ಕೊಡಗು, ಹಾವೇರಿ, ಹಾಸನ , ಚಿಕ್ಕಮಗಳೂರು ಮತ್ತಿತರ ಜಿಲ್ಲೆಗಳಿಗೆ ಪ್ರಾತಿನಿಧ್ಯ ಲಭಿಸಿಲ್ಲ. ಕೆಲವು ಮಾನದಂಡಗಳನ್ನು ಅನುಸರಿಸುವಾಗ ಕೆಲವು ಜಿಲ್ಲೆಗಳಿಗೆ ಪ್ರಾತಿನಿಧ್ಯ ದೊರೆತಿಲ್ಲ. ಉದಾಹರಣೆಗೆ ಕೊಡಗು ಜಿಲ್ಲೆಯಲ್ಲಿ ಇಬ್ಬರೂ ಮೊದಲ ಬಾರಿ ಶಾಸಕರಾಗಿದ್ದಾರೆ. ಹಾಗಾಗಿ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಲು ಸಾಧ್ಯವಾಗಿಲ್ಲ ಎಂದು ನುಡಿದರು.
ಪುಟ್ಟರಂಗಶೆಟ್ಟಿ ಒಪ್ಪಿಕೊಂಡಿದ್ದಾರೆ:
ಪುಟ್ಟರಂಗಶೆಟ್ಟಿ ಅವರು ವಿಧಾನ ಸಭೆಯ ಉಪಾಧ್ಯಕ್ಷ ಹುದ್ದೆಯನ್ನು ಒಪ್ಪಿಕೊಂಡಿಲ್ಲ ಎಂಬ ಕುರಿತ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಅಸಮಾಧಾನ ಸಮಾಧಾನ ಯಾವಾಗಲೂ ಇರುತ್ತದೆ. ಅಸಮಾಧಾನದಲ್ಲಿ ಸಮಾಧಾನವಿರುತ್ತದೆ. ಅವರೊಂದಿಗೆ ನಾನು ನಿನ್ನೆ ರಾತ್ರಿಯೇ ಮಾತನಾಡಿದ್ದೇನೆ. ಅವರು ಒಪ್ಪಿಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದರು.
ADVERTISEMENT
ADVERTISEMENT