ಬೆಂಗಳೂರಿನ ಅವ್ಯವಸ್ಥೆಗೆ ಹಿಂದಿನ ಸರ್ಕಾರವೇ ಕಾರಣ ಎಂದ ಸಿಎಂಗೆ ಸಿದ್ದರಾಮಯ್ಯ ಕ್ಲಾಸ್

Siddaramaiah

ಬೆಂಗಳೂರಿನಲ್ಲಿ ಅತಿಯಾದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಸಮಸ್ಯೆಗಳಿಗೆ ಮೂಲ ಕಾರಣ ಈ ಹಿಂದನ ದರ್ಕಾರಗಳು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕಾಂಗ್ರೆಸ್​​ ಸರ್ಕಾರದ ಬಗ್ಗೆ ಟೀಕಿಸಿದ್ದರು. ಇದೀಗ, ಈ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ರಾಜಕಾಲುವೆಗಳ ಒತ್ತುವರಿ, ತಮ್ಮ ಅವಧಿಯಲ್ಲಿ ಸರ್ಕಾರ ಕೈಗೊಂಡ ಕಾರ್ಯಗಳೇನು.? ಬಿಜೆಪಿ ಸರ್ಕಾರ ಕಳೆದ 3 ವರ್ಷಗಳಿಂದ ಏನು ಮಾಡಿದೆ ಎನ್ನುವದರ ಬಗ್ಗೆ ಮಾಹಿತಿ ನೀಡಿದ್ದಾರೆ.

ಸರಣಿ ಟ್ವಿಟ್ ಮಾಡಿರುವ ಸಿದ್ದರಾಮಯ್ಯನವರು, ಬೆಂಗಳೂರಿನ ಮಳೆ ಅನಾಹುತಗಳಿಗೆ ಹಿಂದಿನ ಸರ್ಕಾರಗಳು ಕಾರಣ ಎಂದು ಪದೆ ಪದೆ ಹೇಳಿಕೆ ನೀಡುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಅವರಿಗೆ ಕೆಲವು ಅಂಶಗಳನ್ನು ನೆನಪಿಸಬಯಸುತ್ತೇನೆ. ಎ.ಟಿ ರಾಮಸ್ವಾಮಿಯವರು ಬೆಂಗಳೂರಿನಲ್ಲಿ 11,980 ಎಕರೆ ಭೂಮಿ ಒತ್ತುವರಿಯಾಗಿತ್ತು ಎಂದು ವರದಿ ನೀಡಿದ್ದರು. ಇದರಲ್ಲಿ 11680 ಎಕರೆ ಭೂಮಿಯನ್ನು ನಮ್ಮ ಸರ್ಕಾರದ ಅವಧಿಯಲ್ಲಿ ತೆರವುಗೊಳಿಸಿದ್ದೆವು. ಇದರ ಜೊತೆಗೆ 7 ಸಾವಿರ ಎಕರೆಗಳನ್ನು ಹೆಚ್ಚುವರಿಯಾಗಿ ತೆರವುಗೊಳಿಸಿದ್ದೆವು.

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಗೋಮಾಳ, ಕೆರೆ, ಕಟ್ಟೆ, ಕುಂಟೆ, ಸರ್ಕಾರಿ ಖರಾಬು, ಗ್ರಾಮಠಾಣ, ಗುಂಡುತೋಪು, ಸ್ಮಶಾನ ಸೇರಿದಂತೆ ಸುಮಾರು 1.23 ಲಕ್ಷ ಎಕರೆ ಭೂಮಿ ಸರ್ಕಾರಕ್ಕೆ ಸೇರಿದ್ದಾಗಿದೆ ಎಂಬ ಮಾಹಿತಿಯನ್ನೂ ಮುಖ್ಯಮಂತ್ರಿಗಳ ಗಮನಕ್ಕೆ ತರಬಯಸುತ್ತೇನೆ. ನಾವು ಒತ್ತುವರಿಯನ್ನಷ್ಟೆ ತೆರವುಗೊಳಿಸಿರಲಿಲ್ಲ, ಸರ್ಕಾರದ ವಶಕ್ಕೆ ಪಡೆದ ಜಮೀನನ್ನು ಸದುಪಯೋಗ ಪಡಿಸಿಕೊಳ್ಳಲು ಯೋಜನೆ ರೂಪಿಸಿದ್ದೆವು. ಬಡವರಿಗಾಗಿ 1 ಲಕ್ಷ ಮನೆ ಕಟ್ಟಲು 1,500 ಎಕರೆ ಭೂಮಿಯನ್ನು ವಸತಿ ಇಲಾಖೆಗೆ ನೀಡಲಾಗಿತ್ತು. ಸಚಿವ ಸೋಮಣ್ಣನವರು ಹಳೆಯ ದಾಖಲೆ ನೋಡಿ ಮಾತನಾಡಿದರೆ ಒಳಿತು. ಇದನ್ನೂ ಓದಿ : ಸಿದ್ದರಾಮಯ್ಯರನ್ನು ಮತ್ತೆ ಸಿಎಂ ಆಗಿ ನೋಡಬೇಕು

ಸರ್ಕಾರದಿಂದ 10 ಲಕ್ಷ ಸಸಿಗಳನ್ನು ನೆಡಲು ಬಿಬಿಎಂಪಿ, ಬಿಡಿಎಗಳಿಗೆ 1618 ಎಕರೆ ಜಮೀನನ್ನು ನೀಡಲಾಗಿತ್ತು. ಉಳಿದಂತೆ ವಿವಿಧ ಸಮುದಾಯಗಳಿಗೆ ಹಾಗೂ ಎಚ್ ಐ ವಿ ಪೀಡಿತರಿಗೆ ವಸತಿ ಕಲ್ಪಿಸಲು 300 ಎಕರೆ ಜಮೀನು ನೀಡಲಾಗಿತ್ತು. ವಶಪಡಿಸಿಕೊಂಡ ಜಾಗದಲ್ಲಿ ಸರಕಾರಿ ಆಸ್ಪತ್ರೆ, ಶಾಲೆ, ಕಾಲೇಜು, ಪೊಲೀಸ್ ಠಾಣೆಯಂತಹ ಸಾರ್ವಜನಿಕ ಉದ್ದೇಶಗಳಿಗೆ 3,604 ಎಕರೆ ಭೂಮಿಯನ್ನು ನೀಡಲಾಗಿತ್ತು. ಉಳಿದ ಜಮೀನಿನಲ್ಲಿ ರಾಜಕಾಲುವೆ, ಕೆರೆ, ಕಟ್ಟೆ, ಅರಣ್ಯ ಮುಂತಾದವುಗಳಿದ್ದವು.

ನಮ್ಮ ಸರ್ಕಾರದ ಅವಧಿಯಲ್ಲಿ ಮುಲಾಜಿಲ್ಲದೆ ಒತ್ತುವರಿ ತೆರವುಗೊಳಿಸಿದ್ದೆವು. ಸೆಪ್ಟೆಂಬರ್ 26, 2014 ರಲ್ಲಿ ಒಂದೆ ದಿನ 132 ಮಿ.ಮೀಟರ್ ಮಳೆ ಬಿದ್ದಿತ್ತು. ಆದರೆ ಮೊನ್ನೆ ಭಾನುವಾರ ಬಿದ್ದ ಮಳೆಯ ಪ್ರಮಾಣ 131.6 ಮಿಮೀ ಮಾತ್ರ. ಆದರೂ ಬೆಂಗಳೂರಿನ ರಸ್ತೆಗಳಲ್ಲಿ ದೋಣಿಗಳನ್ನು ಓಡಾಡಿಸಬೇಕಾದ ಪರಿಸ್ಥಿತಿ ಬಂದಿತ್ತು. ಐ.ಟಿ ಕಂಪೆನಿಗಳು ಸರ್ಕಾರಕ್ಕೆ ಪತ್ರ ಬರೆದು ವ್ಯವಸ್ಥೆ ಸರಿಪಡಿಸದಿದ್ದರೆ ಹೊರ ರಾಜ್ಯಗಳಿಗೆ ಹೋಗಬೇಕಾಗುತ್ತದೆ ಎಂದವು. ಬಿಜೆಪಿ  ಸರ್ಕಾರದ ಸಚಿವ ಸುಧಾಕರ್ ಅವರು ಪತ್ರ ಬರೆದ ಐಟಿ ಸಂಸ್ಥೆಗಳ ಮುಖ್ಯಸ್ಥರಿಗೆ ಧಮಕಿ ಹಾಕುವ ರೀತಿಯಲ್ಲಿ ಮಾತನಾಡಿದ್ದಾರೆ. ಜನರ ಕಷ್ಟ ಕೇಳುವ ಸೌಜನ್ಯವೂ ಸರ್ಕಾರಕ್ಕೆ ಇಲ್ಲವೇ?

ಬಾಣಸವಾಡಿ ಕೆರೆಯ ಒತ್ತುವರಿ ತೆರವು ಮಾಡುವಾಗ ಸುರೇಶ್ ಅವರು “ಸರ್ಕಾರ ಹುಚ್ಚಾಟ ನಡೆಸುತ್ತಿದೆ, ಜನರು ಸರ್ಕಾರಕ್ಕೆ ತೆರಿಗೆ ಕಟ್ಟುತ್ತಿದ್ದಾರೆ, ಆದರೂ ಈ ರೀತಿ ಮಾಡಿರುವುದು ಸರಿಯಲ್ಲ. ಸರ್ಕಾರ ಮನೆ ಒಡೆಯುವ ಪ್ರವೃತ್ತಿ ನಿಲ್ಲಿಸಬೇಕು” ಎಂದು ಹೇಳಿದ್ದರು. ಪ್ರತಿಭಟನೆಯ ನೇತೃತ್ವವನ್ನು ಮಾಜಿ ಸಚಿವರಾದ ಸುರೇಶ್ ವಹಿಸಿಕೊಂಡಿದ್ದರು. ಅವರ ಜೊತೆಯಲ್ಲಿ ಹೆಬ್ಬಾಳದ ಶಾಸಕರಾಗಿದ್ದ ಜಗದೀಶ್ ಕುಮಾರ್ ಅವರೂ ಇದ್ದರು. ವಿಧಾನ ಪರಿಷತ್ ಸದಸ್ಯರುಗಳೂ ಇದ್ದರು. ಇದನ್ನೂ ಓದಿ : ಪ್ರಧಾನಿ ಮೋದಿಗೆ ಸರಣಿ ಪ್ರಶ್ನೆಗಳ ಸವಾಲ್ ಎಸೆದ ಸಿದ್ದರಾಮಯ್ಯ

ನಮ್ಮ ಸರ್ಕಾರವಿದ್ದಾಗ ಮುಂದೆ ಬಂದೊದಗುವ ಪರಿಣಾಮಗಳನ್ನು ಅಂದಾಜು ಮಾಡಿ ಒತ್ತುವರಿ ತೆರವು ಮಾಡುತ್ತಿದ್ದರೆ, ವಿರೋಧ ಪಕ್ಷದಲ್ಲಿದ್ದ ಬಿಜೆಪಿ  ನಮ್ಮ ತೆರವು ಕಾರ್ಯಾಚರಣೆಯನ್ನು ವಿರೋಧ ಮಾಡುತ್ತಿತ್ತು. ಈಗಿನ ಪರಿಸ್ಥಿತಿಗೆ ನಿಮ್ಮ ಪಕ್ಷವೇ ಕಾರಣ ಅಲ್ಲವೇ ಬಸವರಾಜ ಬೊಮ್ಮಾಯಿಯವರೇ.  ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ಒತ್ತುವರಿದಾರರಿಗೆ ಮಾರಾಟ ಮಾಡುವ ರಿಯಲ್ ಎಸ್ಟೇಟ್ ದಂಧೆಗೆ ಅನುಕೂಲ ಮಾಡಿಕೊಡುವ ಕಾನೂನನ್ನು ಜಾರಿಗೆ ತಂದಿದ್ದು ಬಿಜೆಪಿ ಸರ್ಕಾರ. ಬೊಮ್ಮಾಯಿ ಅವರೇ ನೀವೂ ಈ ತಪ್ಪಿನ ಪಾಲುದಾರರಲ್ಲವೇ?

ರೆವಿನ್ಯೂ ಲೇಔಟ್‍ಗಳಲ್ಲಿ ಅಕ್ರಮವಾಗಿ ನಿರ್ಮಿಸಿರುವ ನಿವೇಶನಗಳನ್ನು ಮುಕ್ತವಾಗಿ ಖಾತೆ ಮಾಡಿಕೊಡಲು ಬೊಮ್ಮಾಯಿಯವರ ಸರ್ಕಾರವೇ ಅವಕಾಶ ನೀಡಿದೆ. ಪ್ರತಿ ನಿವೇಶನವನ್ನು ನೋಂದಣಿ ಮಾಡುವಾಗ ಯಾರ್ಯಾರು ಎಷ್ಟೆಷ್ಟು ಕಮಿಷನ್ ತಿನ್ನುತ್ತಿದ್ದಾರೆ ಎಂಬ ವಿಷಯ ಹೊರ ಜಗತ್ತಿಗೆ ಗೊತ್ತಿಲ್ಲ ಎಂದುಕೊಂಡಿದ್ದೀರ? ಅಕ್ರಮ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡಲು ಇದ್ದ ನಿರ್ಬಂಧವನ್ನು ಸಂಪೂರ್ಣವಾಗಿ ತೆಗೆದು ಹಾಕಿದವರು ನೀವೇ ಅಲ್ಲವೇ ಬೊಮ್ಮಾಯಿಯವರೇ. ಇದು ಅಕ್ರಮ ಕಟ್ಟಡಗಳ ತೆರವು ಮಾಡುವ ಬದಲು, ಅವರಿಗೆ ಬೆಂಬಲವಾಗಿ ನಿಂತಂತಲ್ಲವೇ? ಇದನ್ನೂ ಓದಿ : CLP ಸಭೆಯಲ್ಲಿ ಸಿದ್ದರಾಮಯ್ಯಗೆ ಬಹುಪರಾಕ್

ಈಗ ಜಲಾವೃತವಾಗಿರುವ ಮಹದೇವಪುರ, ಬೊಮ್ಮನಹಳ್ಳಿ, ಭಾಗಶಃ ತೊಂದರೆ ಅನುಭವಿಸುತ್ತಿರುವ ಕೆ. ಆರ್ ಪುರಂಗಳಲ್ಲಿ ಎಷ್ಟು ವರ್ಷಗಳಿಂದ ಯಾವ ಪಕ್ಷದ ಶಾಸಕರುಗಳು ಅಧಿಕಾರದಲ್ಲಿದ್ದಾರೆ ಎಂಬುದನ್ನು ನಾನು ಬೊಮ್ಮಾಯಿ  ಅವರಿಗೆ ಒಮ್ಮೆ ನೆನಪಿಸುತ್ತೇನೆ. ಬೊಮ್ಮನಹಳ್ಳಿಯ ಸತೀಶ್ ರೆಡ್ಡಿಯವರು ಎಷ್ಟು ವರ್ಷದಿಂದ ಬಿಜೆಪಿ ಶಾಸಕರು? ಮಹದೇವಪುರದ ಅರವಿಂದ ಲಿಂಬಾವಳಿಯವರು ಎಷ್ಟು ವರ್ಷದಿಂದ ಬಿಜೆಪಿಯಿಂದ ಆಯ್ಕೆಯಾಗುತ್ತಿದ್ದಾರೆ? ಕೆ. ಆರ್ ಪುರಂನ ನಂದೀಶ್ ರೆಡ್ಡಿ ಯಾವ ಪಕ್ಷದವರಾಗಿದ್ದರು ಬೊಮ್ಮಾಯಿಯವರೇ.?

ಬೆಂಗಳೂರು ಅಭಿವೃದ್ಧಿಗಾಗಿ ಈವರೆಗೂ ಒಬ್ಬ ಸ್ವತಂತ್ರ ಸಚಿವರನ್ನು ಬಿಜೆಪಿ ಸರ್ಕಾರ ನೇಮಿಸಿಲ್ಲ. ಬೆಂಗಳೂರು ನಗರಾಭಿವೃದ್ಧಿಗಾಗಿ ಒಬ್ಬ ಸಚಿವರನ್ನು ನೇಮಿಸಿದರೆ ಉಳಿದವರು ಕಿತ್ತಾಟಕ್ಕಿಳಿಯುತ್ತಾರೆ ಎಂಬ ಭಯವೇ ಬೊಮ್ಮಾಯಿಯವರೇ?

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಧೈರ್ಯವಿದ್ದರೆ ಬೆಂಗಳೂರು ಅಭಿವೃದ್ಧಿಯ ಬಗ್ಗೆಯೆ ಅಧಿವೇಶನದಲ್ಲಿ ಪ್ರತ್ಯೇಕ ಚರ್ಚೆ ನಡೆಸಲಿ, ನಾನು ಸಿದ್ಧನಿದ್ದೇನೆ. ಜೊತೆಗೆ ಕಳೆದ 20 ವರ್ಷಗಳಲ್ಲಿ ಏನೇನಾಗಿದೆ ಎಂಬ ಕುರಿತು ಸಮಗ್ರ ವರದಿ ಬಿಡುಗಡೆ ಮಾಡಲಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ : ‘ರಾಜ್ಯ ಬಿಜೆಪಿ ಸರ್ಕಾರದಲ್ಲಿ ಒಬ್ಬನೇ ಒಬ್ಬ ಪ್ರಾಮಾಣಿಕ ಇದ್ದರೂ..?’ – ಸಿದ್ದರಾಮಯ್ಯ

LEAVE A REPLY

Please enter your comment!
Please enter your name here