ರೈತರ ಪಂಪ್​ಸೆಟ್​ಗಳಿಗೆ ಮೀಟರ್ ಅಳವಡಿಸುವ ಪ್ಲಾನ್​ : ಇಂಧನ ಸಚಿವ ಸುನೀಲ್​ಕುಮಾರ್​ಗೆ ಸಿದ್ದರಾಮಯ್ಯ ಸವಾಲ್

Siddaramaiah

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು (Siddaramaiah), ರೈತರ ಪಂಪ್ ಸೆಟ್ ಗಳಿಗೆ ಮೀಟರ್ ಅಳವಡಿಸಲು ಕಾಂಗ್ರೆಸ್ ಸರ್ಕಾರ ಹುನ್ನಾರ ನಡೆಸಿತ್ತು ಎಂಬ ಇಂಧನ ಸಚಿವ ವಿ.ಸುನೀಲ್​ಕುಮಾರ್ ಅವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ರೈತರ ಪಂಪ್ ಸೆಟ್ ಗಳಿಗೆ ಮೀಟರ್ ಅಳವಡಿಸಲು ಕಾಂಗ್ರೆಸ್ ಸರ್ಕಾರ ಹುನ್ನಾರ ನಡೆಸಿತ್ತು ಎಂದು ಆರೋಪಿಸಿರುವ ಸಚಿವ ಸುನೀಲ್ ಕಾರ್ಕಳ ಅವರು ನರೇಂದ್ರ ಮೋದಿಯವರ ಸರ್ಕಾರ ಜಾರಿಗೊಳಿಸಲು ಹೊರಟಿರುವ ಹೊಸ ವಿದ್ಯುತ್ ಕಾಯ್ದೆಯನ್ನು ಒಮ್ಮೆ ಓದಿಕೊಳ್ಳುವುದು ಒಳಿತು..

ಕೊರೊನಾ ಕರ್ಫ್ಯೂ ಇದ್ದ ಕಾಲದಲ್ಲಿಯೇ ಕರಡನ್ನು ಸಿದ್ಧಪಡಿಸಿ, ನೆಪಮಾತ್ರಕ್ಕೆ ಚರ್ಚೆಗೆ ಬಿಟ್ಟಿರುವ ಹೊಸ ವಿದ್ಯುತ್ ಬಿಲ್ ನಲ್ಲಿಯೇ ರೈತರ ಪಂಪ್ ಸೆಟ್ ಗಳಿಗೆ ಮೀಟರ್ ಅಳವಡಿಸುವ ನಿರ್ಧಾರ ಇದೆ. ನಮ್ಮ ಸರ್ಕಾರ ಇಂತಹ ಪ್ರಸ್ತಾಪವನ್ನು ಮಾಡಿದ್ದರೆ ಸುನೀಲ್​ಕುಮಾರ್ ಅದನ್ನು ಬಹಿರಂಗಪಡಿಸಬೇಕು.

ರೈತರ ಪಂಪ್ ಸೆಟ್ ಗಳಿಗೆ ಮೀಟರ್ ಅಳವಡಿಸುವುದನ್ನು ಸುನೀಲ್​ಕುಮಾರ್ ಮತ್ತು ಅವರ ಸರ್ಕಾರ ವಿರೋಧಿಸುವುದಾಗಿದ್ದರೆ ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಕೇಂದ್ರ ನರೇಂದ್ರ ಮೋದಿ ಸರ್ಕಾರದ ಹೊಸ ವಿದ್ಯುತ್ ಮಸೂದೆಯನ್ನು ತಿರಸ್ಕರಿಸಿ, ಸರ್ವಾನುಮತದ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳಿಸೋಣ. ಇದನ್ನೂ ಓದಿ : ಬೆಂಗಳೂರಿನ ಅವ್ಯವಸ್ಥೆಗೆ ಹಿಂದಿನ ಸರ್ಕಾರವೇ ಕಾರಣ ಎಂದ ಸಿಎಂಗೆ ಸಿದ್ದರಾಮಯ್ಯ ಕ್ಲಾಸ್

ಸಚಿವ ಸುನೀಲ್​ಕುಮಾರ್ ಕಾಂಗ್ರೆಸ್ ಸರ್ಕಾರದ ಮೇಲೆ ಸಾಲದ ಸುಳ್ಳು ಆರೋಪ ಹೊರಿಸಿದ್ದಾರೆ. 2014-15ರಲ್ಲಿನ ವಿದ್ಯುತ್ ಉತ್ಪಾದನೆ-14,825 ಮೆ.ವ್ಯಾ.ಮಾತ್ರ. 2018 ರ ಸಾಲಿನ ವಿದ್ಯುತ್ ಉತ್ಪಾದನೆ- 28,741 ಮೆಗಾ ವ್ಯಾಟ್. ಹೆಚ್ಚು ಉತ್ಪಾದನೆ ಎಂದರೆ ಹೆಚ್ಚು ಲಾಭವಲ್ಲವೇ? ನಷ್ಟ ಎಲ್ಲಿದೆ?

ಅವಾಸ್ತವಿಕ ಸೋಲಾರ್ ವಿದ್ಯುತ್ ಖರೀದಿ ಒಪ್ಪಂದದಿಂದಾಗಿ ರಾಜ್ಯಕ್ಕೆ 2000 ಕೋಟಿ ನಷ್ಟವಾಗಿದೆ ಎಂದು ಆರೋಪಿಸಿರುವ ಸಚಿವ ಸುನೀಲ್​ಕುಮಾರ್ ಅವರೇ, ನಿಮ್ಮ ಪಕ್ಷ ಅಧಿಕಾರದಲ್ಲಿರುವ ಗುಜರಾತ್ ರಾಜ್ಯವು ವಿದ್ಯುತ್ ಖರೀದಿಗೆ ಯಾವ ದರ ನಿಗದಿಪಡಿಸಿದೆ ಎನ್ನುವುದನ್ನೂ ತಿಳಿಸಿ ಬಿಡಿ.

ಗುಜರಾತ್ ರಾಜ್ಯವೂ ಸೇರಿದಂತೆ ದೇಶದಲ್ಲಿ ಯಾವ, ಯಾವ ರಾಜ್ಯಗಳು 2010 ರಿಂದ 2022 ರವರೆಗೆ ಎಷ್ಟು ರೂಪಾಯಿಗಳಿಗೆ ಸೋಲಾರ್ ವಿದ್ಯುತ್ ಖರೀದಿ ಒಪ್ಪಂದಗಳನ್ನು ಮಾಡಿಕೊಂಡಿವೆ ಎಂಬುದರ ಕುರಿತು ಶ್ವೇತ ಪತ್ರವನ್ನು ಹೊರಡಿಸಬೇಕೆಂದು ಸುನೀಲ್​ಕುಮಾರ್ ಅವರನ್ನು ಆಗ್ರಹಿಸುತ್ತೇನೆ. ಸಚಿವ ಸುನೀಲ್​ಕುಮಾರ್ ಅವರೇ, ಜನರಿಗೆ ಹೆಚ್ಚು ಹೊರೆ ಬೀಳದಂತೆ ವಿದ್ಯುತ್ ಇಲಾಖೆಯನ್ನು ಲಾಭದಾಯಕವಾಗಿ ಮಾಡುವ ಯೋಚನೆ ನಿಮಗಿದ್ದರೆ ನಾನು ಹಿಂದೆ ವಿಧಾನಸಭಾ ಅಧಿವೇಶನದಲ್ಲಿ ವಿವರವಾಗಿ ನೀಡಿದ್ದ ಸಲಹೆಗಳನ್ನು ಅಧ್ಯಯನ ಮಾಡಿ, ಜಾರಿಗೆ ತರುವ ಧೈರ್ಯ ಮಾಡಿ.

ಪೊಳ್ಳು ವಾದದ ಮೂಲಕ ವೈಫಲ್ಯವನ್ನು ಬಚ್ಚಿಟ್ಟುಕೊಳ್ಳಲು ಹೋಗದೆ, ಸಂಪನ್ಮೂಲ ಸೋರಿಕೆಗೆ ತಡೆ, ಹೆಚ್ಚುವರಿ ವಿದ್ಯುತ್ ಮಾರಾಟ, ಅಗತ್ಯವಿಲ್ಲದಿದ್ದರೂ ಅದಾನಿ ಪವರ್ಸ್ ಸೇರಿದಂತೆ ಖಾಸಗಿಯವರಿಂದ ವಿದ್ಯುತ್ ಖರೀದಿಸುವ ಒಪ್ಪಂದದ ರದ್ದತಿಯೂ ಸೇರಿದಂತೆ ನನ್ನ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ ಸುನೀಲ್​ಕುಮಾರ್ ಎಂದು ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ಆಗ್ರಹಿಸಿದ್ದಾರೆ.  ಇದನ್ನೂ ಓದಿ : ಪ್ರಧಾನಿ ಮೋದಿಗೆ ಸರಣಿ ಪ್ರಶ್ನೆಗಳ ಸವಾಲ್ ಎಸೆದ ಸಿದ್ದರಾಮಯ್ಯ

LEAVE A REPLY

Please enter your comment!
Please enter your name here