ಟಗರು ಸಿದ್ದರಾಮಯ್ಯ ಪಶ್ಚಾತ್ತಾಪ – ನಯವಂಚಕ ಮಾಜಿ ಶಿಷ್ಯನ ವಿರುದ್ಧ ವಾಗ್ಬಾಣ..!

ಪ್ರತಿಷ್ಟಿತ ಉಪ ಚುನಾವಣಾ ಕಣ ಆಗಿರುವ ಚಿಕ್ಕಬಳ್ಳಾಪುರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಬ್ಬರದ ಪ್ರಚಾರ ಕೈಗೊಂಡರು. ಕಾಂಗ್ರೆಸ್‌ ಅಭ್ಯರ್ಥಿ ಅಂಜಿನಪ್ಪ ಪರ ಮತಯಾಚಿಸಿದ ಟಗರು ತಮ್ಮ ಹಳೆಯ ಶಿಷ್ಯ ಸುಧಾಕರ್‌ರನ್ನು ಕೋತಿಗೆ ಹೋಲಿಸಿದ್ದಲ್ಲದೇ ಬೆನ್ನಿಗೆ ಚೂರಿ ಹಾಕಿ ಮುಂಬೈ ಓಡಿಹೋದ ನಯವಂಚಕ ಎಂದು ಜರೆದಿದ್ದಾರೆ.  ಅಲ್ಲದೇ ಚಿಕ್ಕಬಳ್ಳಾಪುರ ಮತ್ತು ಕೋಲಾರಕ್ಕೆ ಪ್ರಯೋಜನಕಾರಿ ಆಗಿರುವ ಎತ್ತಿನಹೊಳೆ ಯೋಜನೆಯನ್ನೂ ಸುಧಾಕರ್‌ ವಿರೋಧಿಸಿದ್ದರು ಎಂದು ಹೊಸ ಬಾಂಬ್‌ ಸಿಡಿಸಿದ್ದಾರೆ ಸಿದ್ದರಾಮಯ್ಯ.

ಮಾಜಿ ಸಿಎಂ ಸಿದ್ದರಾಮಯ್ಯ ಪ್ರಯೋಗಿಸಿದ ಬಾಣ ಬಿರುಸುಗಳು ಹೀಗಿವೆ:

2013ರಲ್ಲಿ ಆಂಜನಪ್ಪನವರಿಗೆ ಟಿಕೆಟ್ ನೀಡುವ ಬದಲು ಸುಧಾಕರ್‌ಗೆ ನೀಡಿದ್ದೆ, ಒಂದುವೇಳೆ ಆಗಲೇ ಆಂಜನಪ್ಪಂಗೆ ಟಿಕೆಟ್ ನೀಡಿದ್ದರೆ ಅವರು ಶಾಸಕರೂ ಆಗಿರುತ್ತಿದ್ದರು ಮತ್ತು ಕ್ಷೇತ್ರ ಇಂದು ಉಪಚುನಾವಣೆ ಎದುರಿಸುವಂತಹ ಸ್ಥಿತಿಯೂ ಬರುತ್ತಿರಲಿಲ್ಲ. ಎಂಥಾ ನಯವಂಚಕನಿಗೆ ಟಿಕೆಟ್ ನೀಡಿದೆನಲ್ಲಾ ಅಂತ ಈಗ ಪಶ್ಚಾತಾಪವಾಗುತ್ತಿದೆ.

ಸುಧಾಕರ್ ಒಂಥರ ಊಸರವಳ್ಳಿ ಇದ್ದಂಗೆ. ಜಾತ್ಯಾತೀತರ ಜೊತೆ ಇದ್ದಾಗ ಅವರಂತೆ, ಕೋಮುವಾದಿಗಳ ಜೊತೆಯಿದ್ದಾಗ ಅವರಂತೆ ಬಣ್ಣ ಬದಲಾಯಿಸುತ್ತಾರೆ. ಇವತ್ತೇನಾದರೂ ಬಿಜೆಪಿಯ ಆಪರೇಷನ್ ಕಮಲ ಯಶಸ್ವಿಯಾಗಿದ್ದರೆ ಅದರ ಕಿಂಗ್‌ಪಿನ್ ಈ ಸುಧಾಕರ್. ‘ಕೋತಿ ತಾನು ಕೆಡುವುದಲ್ಲದೆ ಇಡೀ ವನವನ್ನೇ ಕೆಡಿಸಿತ್ತಂತೆ’ ಹಾಗೆ ಇದು.

ಬೆಳಿಗ್ಗೆ 9 ಗಂಟೆಗೆ ರಾಜೀನಾಮೆ ವಾಪಾಸು ತಗೋತೀನಿ ಅಂತ ರಾತ್ರಿ ನನಗೆ ಮಾತು ಕೊಟ್ಟು, ಮುಂಜಾನೆ 6 ಗಂಟೆಗೆ ಕದ್ದು ಮುಂಬೈ ಓಡಿಹೋದ ಆಸಾಮಿ ಈ ಸುಧಾಕರ್. ಇಂಥವರನ್ನು ನಯಾಪೈಸೆಗೂ ನಂಬಬೇಡಿ. ಸದಾ ಇವರ ಒಳ್ಳೆಯದನ್ನೇ ಬಯಸಿದ ನಮ್ಮ ಬೆನ್ನಿಗೇ ಚೂರಿ ಹಾಕಿದವರು ಇನ್ನು ಕ್ಷೇತ್ರದ ಅಮಾಯಕ ಜನರನ್ನು ಬಿಟ್ಟಾರೆಯೇ..?

2016-17ರ ಬಜೆಟ್‌ನಲ್ಲಿ ರಾಜ್ಯದ ಪ್ರತಿ ಜಿಲ್ಲೆಗೊಂದು ಮೆಡಿಕಲ್ ಕಾಲೇಜು ಸ್ಥಾಪನೆಗೆ ಅನುಮೋದನೆ ನೀಡಿದ್ದು ನಮ್ಮ ಸರ್ಕಾರ. ಹಾಗಾಗಿ ಚಿಕ್ಕಬಳ್ಳಾಪುರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗುತ್ತಿದೆ. ಅಂದಿನ ಬಜೆಟ್ ಮಂಡಿಸಿದ್ದು ನಾನು, ಆರ್ಥಿಕ ಸಚಿವ ನಾನು, ಮುಖ್ಯಮಂತ್ರಿ ನಾನು. ಇದರಲ್ಲಿ ನಿಮ್ಮ ಸಾಧನೆ ಏನಿದೆ Mr.ಸುಧಾಕರ್?

ಚಿಕ್ಕಬಳ್ಳಾಪುರ ಭಾಗಕ್ಕೆ ನೀರು ಹರಿಸುವ ಎತ್ತಿನಹೊಳೆ ಯೋಜನೆ ಅನುಷ್ಠಾನಗೊಳಿಸಿದ್ದು ನಮ್ಮ‌ ಸರ್ಕಾರ. ನಾನು ಮುಖ್ಯಮಂತ್ರಿಯಾಗಿದ್ದಾಗ ವೀರಪ್ಪ ಮೊಯ್ಲಿ, ಶಿವಶಂಕರ್ ರೆಡ್ಡಿ ಇವರೆಲ್ಲರ ಸಹಕಾರದಿಂದ ಯೋಜನೆ ಜಾರಿ ಮಾಡಿದ್ದೆ. ಕುಡಿಯಲು ನೀರು ಕೊಟ್ಟವರಿಗೆ ಮೋಸಮಾಡಿ, ಯೋಜನೆಗೆ ವಿರೋಧ ಮಾಡಿದ್ದ ಬಿಜೆಪಿ ಜೊತೆ ಈಗ ಸುಧಾಕರ್ ಕೈಜೋಡಿಸಿದ್ದಾರೆ.

LEAVE A REPLY

Please enter your comment!
Please enter your name here