ಉಪರಾಷ್ಟ್ರಪತಿ ಚುನಾವಣೆಯಲ್ಲಿ ಪ್ರತಿಪಕ್ಷಗಳ ಒಕ್ಕೂಟದ ಅಭ್ಯರ್ಥಿಯಾಗಿರುವ ಮಾರ್ಗರೇಟ್ ಆಳ್ವ ಅವರಿಗೆ ಶಿವಸೇನೆ ಬೆಂಬಲ ನೀಡುತ್ತದೆ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.
ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿಯಾಗಿರುವ ದ್ರೌಪದಿ ಮುರ್ಮು ಅವರಿಗೆ ಶಿವಸೇನೆ ಬೆಂಬಲ ಘೋಷಿಸಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಸಂಜಯ್ ರಾವತ್, ದ್ರೌಪದಿ ಮುರ್ಮು ಅವರು ಆದಿವಾಸಿ ಸಮುದಾಯದವರು. ನಮ್ಮ ಹಲವು ಜನ ಶಾಸಕರು ಆದಿವಾಸಿ ಸಮುದಾಯದವರು. ಆ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಚುನಾವಣೆಯಲ್ಲಿ ದ್ರೌಪದಿ ಮುರ್ಮು ಅವರಿಗೆ ಬೆಂಬಲ ಘೋಷಿಸಲಾಗಿತ್ತು.
ಇದೀಗ, ನಾವು ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮಾರ್ಗರೇಟ್ ಆಳ್ವ ಅವರಿಗೆ ಬೆಂಬಲಿಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರುವ ಶಿವಸೇನೆ ಎರಡು ಬಣಗಳಾಗಿ ವಿಭಜನೆಯಾಗಿದೆ. ಉದ್ದವ್ ಠಾಕ್ರೆಯವರ ಬಣ ಹಾಗೂ ಮುಖ್ಯಮಂತ್ರಿ ಏಕನಾಥ್ ಶಿಂಧೆಯವರ ಬಣ.
ಪಕ್ಷದ ಚಿಹ್ನೆ ಹಾಗೂ ಪಕ್ಷದ ಅಧಿಕಾರದ ಬಗ್ಗೆ ಎರಡೂ ಗುಂಪುಗಳ ನಡುವೆ ಜಟಾಪಟಿ ನಡೆದಿದೆ. ಮೂಲ ಶಿವಸೇನೆಯ ಜಟಾಪಟಿ ಸುಪ್ರಿಂ ಕೋರ್ಟ್ ಅಂಗಳದಲ್ಲಿದೆ.