ನಮ್ಮ-ನಿಮ್ಮ ಸಂಬಂಧ ಚೆನ್ನಾಗಿದೆ, ಆದರೆ..! – ಪ್ರಧಾನಿ ಮೋದಿಗೆ ಶರದ್‌ ಪವಾರ್‌ ಹೇಳಿದ್ದೇನು..?

ಮಹಾರಾಷ್ಟ್ರದಲ್ಲಿ ಶಿವಸೇನೆ-ಎನ್‌ಸಿಪಿ ಮತ್ತು ಕಾಂಗ್ರೆಸ್‌ ಸೇರಿಕೊಂಡು ಮೈತ್ರಿ ಸರ್ಕಾರ ಮಾಡಿ ಆಗಿದೆ. ಇದಾದ ವಾರದೊಳಗೆ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಸ್ಫೋಟಕ ಮಾತೊಂದನ್ನು ಆಡಿದ್ದಾರೆ. ಅದೂ ಪ್ರಧಾನಿ ನರೇಂದ್ರ ಮೋದಿಯವರ ಕುರಿತು.

ನಾವಿಬ್ಬರೂ ಒಟ್ಟಾಗಿ ಕೆಲಸ ಮಾಡೋಣ ಎಂಬ ಆಹ್ವಾನವನ್ನು ಪ್ರಧಾನಿ ನನಗೆ ಕೊಟ್ಟಿದ್ದರು. ಆದರೆ ನಾನು ಅದನ್ನು ತಿರಸ್ಕರಿಸಿದ್ದೆ. ನಮ್ಮಿಬ್ಬರ ವೈಯಕ್ತಿಕ ಸಂಬಂಧ ಚೆನ್ನಾಗಿದೆ. ಅದೂ ಹಾಗೆಯೇ ಇರುತ್ತದೆ. ಆದರೆ ಜೊತೆಯಾಗಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ನಾನು ಪ್ರಧಾನಿ ಮೋದಿಗೆ ಹೇಳಿದ್ದೆ

ಎಂದು ಮರಾಠಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪವಾರ್‌ ಹೇಳಿಕೊಂಡಿದ್ದಾರೆ.

ಒಂದೆಡೆ ಎನ್‌ಸಿಪಿ-ಶಿವಸೇನೆ ಮತ್ತು ಕಾಂಗ್ರೆಸ್‌ ಮೈತ್ರಿ ಸರ್ಕಾರ ರಚನೆಯ ಬಗ್ಗೆ ಮಾತುಕತೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಪವಾರ್‌ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಆಗಿದ್ದರು. ಆಗ ಶಿವಸೇನೆಗೆ ಶಾಕ್‌ ಕೊಟ್ಟು ಎನ್‌ಸಿಪಿ ಮತ್ತು ಬಿಜೆಪಿ ಒಟ್ಟಾಗಿ ಸರ್ಕಾರ ರಚನೆ ಮಾಡುತ್ತಾರೆ ಎಂಬ ಗುಮಾನಿಯೂ ಎದ್ದಿತ್ತು. ಇಂಥ ಸನ್ನಿವೇಶದಲ್ಲಿ ಪ್ರಧಾನಿಯನ್ನು ಪವಾರ್‌ ಭೇಟಿ ಆಗಿದ್ದು ಸರಿಯಲ್ಲ ಎಂಬ ಮಾತನ್ನು ಕಾಂಗ್ರೆಸ್‌ ಕೂಡಾ ಆಡಿತ್ತು.

ಆದರೆ ಮಹಾರಾಷ್ಟ್ರದಲ್ಲಿ ಹೊಂದಾಣಿಕೆ ಮಾಡಿಕೊಂಡರೆ ತಮ್ಮನ್ನು ರಾಷ್ಟ್ರಪತಿಯನ್ನಾಗಿ ಮಾಡುವ ಆಫರ್‌ನ್ನು ಪ್ರಧಾನಿ ಮೋದಿ ತಮ್ಮ ಮುಂದಿಟ್ಟಿದ್ದರು ಎಂಬ ವರದಿಗಳನ್ನು ಪವಾರ್‌ ಸಂದರ್ಶನದಲ್ಲಿ ಒಪ್ಪಿಕೊಂಡಿಲ್ಲ.

ಆದರೆ ತಮ್ಮ ಮಗಳೂ ಆಗಿರುವ ಸಂಸದೆ ಸುಪ್ರಿಯಾ ಸುಳೆಯನ್ನು ಪ್ರಧಾನಿ ಮೋದಿ ಸರ್ಕಾರದಲ್ಲಿ ಮಂತ್ರಿ ಮಾಡುವ ಆಫರ್‌ನ್ನು ನೀಡಲಾಗಿತ್ತು

ಎಂದು ಪವಾರ್‌ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here