ADVERTISEMENT
ದೇಶದ ಹಲವು ಭಾಗಗಳಲ್ಲಿ ನಡೆದ ಸರಣಿ ಇವಿ ಬೈಕ್ ಗಳ ಅಗ್ನಿ ಅವಘಡ ಮತ್ತು ಬ್ಯಾಟರಿ ಸ್ಫೋಟ ಅವಘಡಗಳ ಹಿನ್ನಲೆಯಲ್ಲಿ ಓಲಾ ಸಂಸ್ಥೆ ತನ್ನ 1,441 ಎಲೆಕ್ಟ್ರಿಕ್ ಬೈಕ್ ಗಳನ್ನು ಹಿಂಪಡೆಯಲು ಮುಂದಾಗಿದೆ.
ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಬೆಂಕಿ ಹೊತ್ತಿಕೊಂಡ ಘಟನೆ ದೇಶದಲ್ಲಿ ಭಾರಿ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೇ ಓಲಾ ಕಂಪನಿಯು ತನ್ನ 1,441 ವಾಹನಗಳನ್ನು ಭಾನುವಾರ ಹಿಂಪಡೆದಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಓಲಾ ಸಂಸ್ಥೆ, ‘ಮಾರ್ಚ್ 26 ರಂದು ಪುಣೆಯಲ್ಲಿ ಸಂಭವಿಸಿದ ಅಗ್ನಿ ಅವಘಡದ ತನಿಖೆ ನಡೆಯುತ್ತಿದೆ. ಪ್ರಾಥಮಿಕ ತನಿಖೆ ಪ್ರಕಾರ ಇದೊಂದು ಪ್ರತ್ಯೇಕ ಸಮಸ್ಯೆ ಎಂದು ಹೇಳಿದೆ.
ಆದರೂ, ‘ಮುನ್ನೆಚ್ಚರಿಕಾ ಕ್ರಮವಾಗಿ ನಾವು ನಿರ್ದಿಷ್ಟ ಬ್ಯಾಚ್ನ ವಾಹನಗಳನ್ನು ಪರಿಶೀಲಿಸುತ್ತೇವೆ. ಆದ್ದರಿಂದ 1,441 ವಾಹನಗಳನ್ನು ಸ್ವಯಂಪ್ರೇರಿತವಾಗಿ ಹಿಂಪಡೆಯುತ್ತಿದ್ದೇವೆ. ಹಿಂಪಡೆದ ಸ್ಕೂಟರ್ಗಳನ್ನು ಎಂಜಿನಿಯರ್ಗಳು ಪರಿಶೀಲಿಸುತ್ತಾರೆ. ಬ್ಯಾಟರಿ ವ್ಯವಸ್ಥೆಗಳು, ಥರ್ಮಲ್ ಸಿಸ್ಟಮ್ಗಳು ಮತ್ತು ಸುರಕ್ಷತಾ ವ್ಯವಸ್ಥೆಗಳಲ್ಲಿನ ಸಮಸ್ಯೆಯನ್ನು ಪತ್ತೆ ಮಾಡಲಿದ್ದಾರೆ. ಬ್ಯಾಟರಿ ವ್ಯವಸ್ಥೆಗಳು ಯುರೋಪಿನ ‘ಇಸಿಇ–136’ ಮಾನದಂಡಗಳಿಗೆ ಅನುಗುಣವಾಗಿವೆ. ಜತೆಗೆ, ಭಾರತದ ಇತ್ತೀಚಿನ ಪ್ರಸ್ತಾವಿತ ‘ಎಐಎಸ್–156’ಗೆ ಅನುಗುಣವಾಗಿ ಪರೀಕ್ಷಿಸಲ್ಪಟ್ಟಿದೆ’ ಎಂದು ಓಲಾ ಹೇಳಿದೆ.
ದೇಶದ ಹಲವು ಭಾಗಗಳಲ್ಲಿ ವಿದ್ಯುತ್ ಚಾಲಿತ ಬೈಕ್ ಗಳ ಸರಣಿ ಅವಘಡ ನಡೆದಿದ್ದು, ಇಂದು ಕೂಡ ವಿಜಯವಾಡದಲ್ಲಿ ಚಾರ್ಜಿಂಗ್ ಹಾಕಿದ್ದ ಬೈಕ್ ಬ್ಯಾಟರಿ ಸ್ಫೋಟಗೊಂಡು 40 ವರ್ಷದ ವ್ಯಕ್ತಿ ಸಾವನ್ನಪ್ಪಿ, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಅಗ್ನಿ ಅವಘಡಗಳನ್ನು ಪರಿಶೀಲಿಸಲು ಸರ್ಕಾರ ಕೂಡ ಸಮಿತಿಯನ್ನು ರಚಿಸಿದೆ. ಕಂಪನಿಗಳು ಈ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದರೆ ದಂಡ ವಿಧಿಸುವುದಾಗಿಯೂ ಸರ್ಕಾರ ಎಚ್ಚರಿಕೆ ನೀಡಿದೆ.
ADVERTISEMENT