ಧರ್ಮಸ್ಥಳ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿ ಸಂತೋಷ್ ರಾವ್ ಖುಲಾಸೆಗೊಳಿಸಿ ಬೆಂಗಳೂರಿನ ಸಿಬಿಐ ನ್ಯಾಯಾಲಯ ತೀರ್ಪು ನೀಡಿದೆ.
ಸಂತೋಷ್ ರಾವ್ ವಿರುದ್ಧ ಅಗತ್ಯ ಸಾಕ್ಷ್ಯಾಧಾರಗಳಿಲ್ಲದ ಹಿನ್ನೆಲೆಯಲ್ಲಿ ಸಿಬಿಐ ನ್ಯಾಯಾಲಯ ಆರೋ ಮುಕ್ತಗೊಳಿಸಿದೆ. ನ್ಯಾಯಾಧೀಶ ಸಿ ಬಿ ಸಂತೋಷ್ ಅವರು ತೀರ್ಪು ನೀಡಿದ್ದಾರೆ.
ಈ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಚಲನ ಸೃಷ್ಟಿಸಿದ್ದ ಸೌಜನ್ಯ ಕೊಲೆ ಪ್ರಕರಣಕ್ಕೆ 11 ವರ್ಷಗಳ ಬಳಿಕ ತೆರೆಬಿದ್ದಿದೆ.
2012ರ ಅಕ್ಟೋಬರ್ 10ರಂದು ಉಜಿರೆಯಲ್ಲಿರುವ ಎಸ್ಡಿಎಂ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸೌಜನ್ಯ ನಾಪತ್ತೆಯಾಗಿದ್ದಳು. ಮಗಳ ನಾಪತ್ತೆ ಸಂಬಂಧ ಸೌಜನ್ಯ ತಂದೆ ಚಂದ್ರಪ್ಪ ಗೌಡ ಅವರು ಪೊಲೀಸರಿಗೆ ದೂರು ನೀಡಿದ್ದರು.
ಬಳಿಕ ಸೌಜನ್ಯ ಮೃತದೇಹ ಧರ್ಮಸ್ಥಳದ ಬಳಿ ಪತ್ತೆಯಾಗಿತ್ತು. ಅತ್ಯಾಚಾರಕ್ಕೊಳಗಾಗಿ ಕೊಲೆ ಆರೋಪದ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿಗೆ ಒಪ್ಪಿಸಲಾಯಿತು. ಆದರೆ ಪ್ರತಿಭಟನೆ ತೀವ್ರವಾದ ಬಳಿಕ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐಗೆ ಒಪ್ಪಿಸಿತು.
2016ರಲ್ಲಿ ಸಿಬಿಐ ಆರೋಪಪಟ್ಟಿ ಸಲ್ಲಿಸಿತು. ಸಿಬಿಐ ಆರೋಪಪಟ್ಟಿ ವಿರುದ್ಧ ಸೌಜನ್ಯ ತಂದೆ ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ ವಜಾಗೊಳಿಸಿತು ಮತ್ತು ಮರು ತನಿಖೆಗೆ ಸಿಬಿಐಗೆ ಆದೇಶಿಸಬೇಕು ಎಂಬ ಕೋರಿಕೆಯನ್ನೂ ತಿರಸ್ಕರಿಸಿತು.
ADVERTISEMENT
ADVERTISEMENT