ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಎಐಡಿಎಂಕೆ ಮಾಜಿ ನಾಯಕಿ ವಿ ಕೆ ಶಶಿಕಲಾ ಅವರ ರಾಜಾತಿಥ್ಯ ಕೊಟ್ಟ ಆರೋಪಕ್ಕೆ ಸಂಬಂಧಿಸಿದಂತೆ ಮೂವರು ಜೈಲಾಧಿಕಾರಿಗಳ ವಿರುದ್ಧದ ಕ್ರಿಮಿನಲ್ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠ ಆದೇಶ ನೀಡಿದೆ.
ಶಶಿಕಲಾ ಅವರಿಗೆ ರಾಜಾತಿಥ್ಯ ಆರೋಪದಡಿಯಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಗಜರಾಜ, ಸಹಾಯಕ ಜೈಲು ಅಧೀಕ್ಷಕಿ ಡಾ ಅನಿತಾ ಮತ್ತು ಕಾರಾಗೃಹದ ಮುಖ್ಯ ಅಧೀಕ್ಷಕ ಕೃಷ್ಣ ಕುಮಾರ್ ಅವರ ವಿರುದ್ಧ ಕ್ರಿಮಿನಲ್ ತನಿಖೆ ನಡೆಯುತ್ತಿತ್ತು.
ಅಕ್ರಮ ಆಸ್ತಿ ಗಳಿಕೆಯಲ್ಲಿ ಆರೋಪಿಗಳಾಗಿದ್ದ ಶಶಿಕಲಾ ಮತ್ತು ಇಳವರಸಿ 2017ರ ಫೆಬ್ರವರಿಯಲ್ಲಿ ಜೈಲು ಸೇರಿದ್ದರು. ಇದಾದ ಐದು ತಿಂಗಳ ಬಳಿಕ ಅನಾಮಧೇಯ ಪತ್ರದಲ್ಲಿ ಶಶಿಕಲಾಗೆ ಪೊಲೀಸರು ಲಂಚ ಪಡೆದು ರಾಜಾತಿಥ್ಯ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು.
ಜೈಲಿನಲ್ಲೇ ಎಐಡಿಎಂಕೆ ಶಾಸಕರು ಮತ್ತು ಸಂಸದರ ಭೇಟಿಗೆ ಅನುಮತಿ ನೀಡಲಾಗಿತ್ತು, ಆದರೆ ಇವರ ಭೇಟಿ ಬಗ್ಗೆ ಜೈಲಿನ ದಾಖಲೆಗಳಲ್ಲಿ ಉಲ್ಲೇಖ ಮಾಡಿರಲಿಲ್ಲ ಎಂದು ಆರೋಪಿಸಲಾಗಿತ್ತು.
ಈ ಸಂಬಂಧ ರಾಜ್ಯ ಸರ್ಕಾರ ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ಅವರ ನೇತೃತ್ವದಲ್ಲಿ ತನಿಖೆಗೆ ಸೂಚಿಸಿತ್ತು. ಯಾವುದೇ ಅಕ್ರಮ ಎಸಗಲಾಗಿಲ್ಲ ಎಂದು ವಿನಯ್ ಕುಮಾರ್ ಸರ್ಕಾರಕ್ಕೆ ವರದಿ ನೀಡಿದ್ದರು.
ಇದಾದ ಬಳಿಕ ಕಾರಾಗೃಹದ ನಿವೃತ್ತ ಡಿಜಿಪಿ ಹೆಚ್ ಎನ್ ಸತ್ಯನಾರಾಯಣ ರಾವ್ ಅವರ ವಿರುದ್ಧ ಎಸಿಬಿ ತನಿಖೆಗೆ ಸೂಚಿಸಿತ್ತು. ಇದಾದ ಬಳಿಕ ಅರ್ಜಿದಾರರ ವಿಚಾರಣೆಗೆ ಅನುಮತಿ ಕೋರಿ ಎಸಿಬಿ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು.
ಸತ್ಯನಾರಾಯಣ್ ರಾವ್ ವಿರುದ್ಧ ಎಸಿಬಿ ತನಿಖೆಗೆ ರಾಜ್ಯ ಸರ್ಕಾರ ಸೂಚಿಸಿದ್ದರೂ ಎಸಿಬಿ ಸಲ್ಲಿಸಿದ್ದ ಆರೋಪಪಟ್ಟಿಯಲ್ಲಿ ಅವರ ಹೆಸರನ್ನು ಕೈಬಿಡಲಾಗಿದೆ ಮತ್ತು ತಮ್ಮ ಹೆಸರು ತನಿಖಾ ವರದಿಯಲ್ಲಾಗಲೀ ಅಥವಾ ಎಫ್ಐಆರ್ನಲ್ಲಾಗಲೀ ಉಲ್ಲೇಖವಾಗಿಲ್ಲ. ಹೀಗಾಗಿ ತಮ್ಮನ್ನು ಸುಳ್ಳು ಕೇಸ್ನಲ್ಲಿ ಸಿಲುಕಿಸಲು ಹುನ್ನಾರ ಮಾಡಲಾಗಿದೆ ಎಂದು ಮೂವರು ಅಧಿಕಾರಿಗಳು ಹೈಕೋರ್ಟ್ ತಮ್ಮ ವಿರುದ್ಧ ತನಿಖೆ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು.
ADVERTISEMENT
ADVERTISEMENT