ಧರ್ಮದ ಹೆಸರಲ್ಲಿ ಹಿಂಸಾಚಾರ ಸಲ್ಲ ಎಂದು ಹೇಳಿದ್ದಕ್ಕೆ ನಟಿ ಸಾಯಿ ಪಲ್ಲವಿ ವಿರುದ್ಧ ಬಲ ಪಂಥಿಯರು ತಿರುಗಿಬಿದ್ದು, ಟ್ರೋಲ್ ಮಾಡಿ, ಬೆದರಿಕೆ ಹಾಕುವ ಕೆಲಸ ಮಾಡಿದ್ದರು. ಆದರೆ, ಇದರಿಂದ ನಟಿ ಸಾಯಿ ಪಲ್ಲವಿ ಹೆದರಿಲ್ಲ. ತಮ್ಮ ನಿಲುವನ್ನು ಬದಲಾಯಿಸಿಲ್ಲ. ಬದಲಾಗಿ ಮಾನವೀಯತೆಯೇ ದೊಡ್ಡದು ಎಂಬುದನ್ನು ಮನದಟ್ಟು ಮಾಡಿಸಲು ಪ್ರಯತ್ನಿಸಸಿದ್ದಾರೆ. ತಮ್ಮ ಹೇಳಿಕೆಯನ್ನು ಉದ್ದೇಶವನ್ನು ಅರಿಯದೇ, ಬೇಕಂತಲೇ ವಿವಾದ ಸೃಷ್ಟಿ ಮಾಡಿದವರಲ್ಲಿಯೂ ಶಾಂತಿ, ನೆಮ್ಮದಿ, ಪ್ರೀತಿ ನೆಲೆಸಲಿ ಎಂದು ತುಂಬಾ ಪ್ರಬುದ್ಧರಾಗಿ ಸ್ಪಷ್ಟನೆ ನೀಡಿದ್ದಾರೆ.
ಸಾಯಿ ಪಲ್ಲವಿ ನೀಡಿದ ಸ್ಪಷ್ಟನೆಯ ಪೂರ್ಣ ಪಾಠ
ಕಳೆದ ಕೆಲ ದಿನಗಳಿಂದ ನನ್ನ ಮೇಲೆ ವಿಮರ್ಶೆ, ಟೀಕೆ, ನನ್ನ ಹೇಳಿಕೆಯನ್ನು ತಿರುಚಿ ನಡೆಯುತ್ತಿರುವ ಪ್ರಚಾರಗಳಿಗೆ ಸಂಬಂಧಿಸಿ ಸ್ಪಷ್ಟನೆ ನೀಡುವ ಸಲುವಾಗಿಯೇ ನಿಮ್ಮ ಮುಂದೆ ಬಂದಿದ್ದೇನೆ. ಈಗ ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಲು ಒಂದಕ್ಕೆ ಎರಡು ಬಾರಿ ಆಲೋಚನೆ ಮಾಡುವಂತಾಗಿದೆ. ಏಕೆಂದರೇ ನನ್ನ ಮಾತುಗಳಿಂದ ಯಾರಿಗೂ ನೋವಾಗಬಾರದು. ಒಂದೊಮ್ಮೆ ಯಾರಿಗಾದರೂ ನೋವಾಗಿದ್ದಲ್ಲಿ ಕ್ಷಮೆ ಇರಲಿ.
ಇತ್ತೀಚಿಗೆ ನಾನು ನೀಡಿದ ಸಂದರ್ಶನದಲ್ಲಿ ನೀವು ಎಡ ಪಂಥವನ್ನು ಬೆಂಬಲಿಸುತ್ತೀರಾ? ಬಲ ಪಂಥವನ್ನು ಬೆಂಬಲಿಸುತ್ತೀರಾ? ಎಂದು ಕೇಳಿದರು. ಅದಕ್ಕೆ ನಾನು ಎಡ ಬಲ ಎನ್ನದೆ ಮೊದಲು ನಾವು ಮನುಷ್ಯರಾಗಿ ಜೀವಿಸೋಣ ಎಂಬ ಉದ್ದೇಶದಿಂದ ಉತ್ತರ ನೀಡಿದೆ.. ಆದರೇ ನನ್ನ ಮಾತುಗಳನ್ನು ಕೆಲವರು ತಪ್ಪಾಗಿ ಅರ್ಥ ಮಾಡಿಕೊಂಡು ಏನೇನೋ ಹಬ್ಬಿಸಿದರು. ಮಾಬ್ ಲಿಂಚಿಂಗ್ (ಗುಂಪು ಹಲ್ಲೆ)ಯನ್ನು ಸಮರ್ಥಿಸಿದರು. ಕೆಲವು ವೆಬ್ ಸೈಟ್ ಗಳು, ಖ್ಯಾತನಾಮರು ಕೂಡಾ ನನ್ನ ಹೇಳಿಕೆಯ ಹಿಂದಿನ ಉದ್ದೇಶ, ಪೂರ್ಣ ಹೇಳಿಕೆಯನ್ನು ಗಮನಿಸದೆ ಏನೇನೋ ಮಾತನಾಡಿದರು.
ನಾನು ದಿ ಕಾಶ್ಮೀರ್ ಫಿಲಂಸ್ ನೋಡಿದ ಸಂದರ್ಭದಲ್ಲಿ ಅದರಲ್ಲಿ ಹಿಂಸೆ, ನರಮೇಧ ನೋಡಿ ಮನಸ್ಸೆಲ್ಲಾ ವ್ಯಾಕುಲಗೊಂಡಿತ್ತು. ಹಲವು ತಲೆಮಾರುಗಳ ಮೇಲೆ ಪ್ರಭಾವ ಬೀರಿದ ಈ ನರಮೇಧ ನೋಡಿ ನನ್ನ ಮನಸ್ಸು ಸರಿ ಹೋಗಲು ಕೆಲ ದಿನ ಬೇಕಾಯಿತು. ಈ ಮಾತನ್ನು ನಿರ್ದೇಶಕರ ಬಳಿಯೂ ಹೇಳಿದ್ದೆ. ಅದೇ ರೀತಿಯಲ್ಲಿ ಕೋವಿಡ್ ಸಂದರ್ಭದಲ್ಲಿ ನಡೆದ ಗುಂಪು ಹಲ್ಲೆಯ ಘಟನೆಯೂ ನನ್ನನ್ನು ಕದಡಿತ್ತು. ಇದನ್ನೂ ಹೇಳಬೇಕು ಎಂದು ನಾನು ಬಯಸಿದ್ದೆ.
ನನ್ನ ದೃಷ್ಟಿಯಲ್ಲಿ ಹಿಂಸೆ ಎನ್ನುವುದು ತಪ್ಪು. ಯಾವ ಧರ್ಮವು ಇದನ್ನು ಒಪ್ಪಲ್ಲ. ಧರ್ಮದ ಪ್ರಕಾರ ಇದು ತಪ್ಪು. ಒಬ್ಬ ಡಾಕ್ಟರ್ ಆಗಿ ಪ್ರಾಣದ ಬೆಲೆ ಏನು ಎಂಬುದು ಗೊತ್ತು. ಒಬ್ಬರ ಪ್ರಾಣವನ್ನು ತೆಗೆಯುವ ಹಕ್ಕು ಯಾರಿಗೂ ಇಲ್ಲ. ಎಲ್ಲರ ಜೀವವು ಮುಖ್ಯವೇ.
ನಾನು ಶಾಲಾ ದಿನಗಳಲ್ಲಿ ಎಲ್ಲಾ ಭಾರತೀಯರು ನನ್ನ ಸಹೋದರ, ಸಹೋದರಿಯರು, ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ ಎಂದು 14 ವರ್ಷಗಳ ಕಾಲ ಪಠಿಸಿದ್ದು ನನ್ನ ಮನಸ್ಸಿನಲ್ಲಿ ಬೇರೂರಿದೆ ಎಂದು ಕಾಣುತ್ತೆ. ನಾವು ಧರ್ಮ, ಜಾತಿ, ಸಂಸ್ಕೃತಿ ಅಧರಿಸಿ ತಾರತಮ್ಯ ಮಾಡಲಿಲ್ಲ. ನಾವು ಜಾತಿ ಧರ್ಮದ ಹಂಗಿಲ್ಲದೆ ಬೆಳೆದವರು.
ಮುಂದೆ ಯಾವುದೇ ಮಗು ತನ್ನ ಗುರುತನ್ನು ಹೇಳಿಕೊಳ್ಳಲು ಹೆದರುವ ದಿನ ಬರಬಾರದು ಎಂದು ಪ್ರಾರ್ಥಿಸುತ್ತೇನೆ.
ಇಂತಹ ಸಂಕಷ್ಟದ ಸಂದರ್ಭದಲ್ಲಿ ನನ್ನ ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದ. ಕೊನೆಯಲ್ಲಿ ಎಲ್ಲರಿಗೂ ಶಾಂತಿ, ನೆಮ್ಮದಿ, ಪ್ರೀತಿ ಸಿಗಲಿ.
– ಸಾಯಿ ಪಲ್ಲವಿ, ನಟಿ