BIG BREAKING: ಕಾಂಗ್ರೆಸ್​ನಿಂದ ಹೊರಬಂದು ಹೊಸ ಪಕ್ಷ ಕಟ್ಟಲಿರುವ ಸಚಿನ್​ ಪೈಲಟ್​

ಈ ವರ್ಷದ ಅಂತ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ರಾಜಸ್ಥಾನದಲ್ಲಿ ಕಾಂಗ್ರೆಸ್​​ಗೆ ದೊಡ್ಡ ಆಘಾತ ಎದುರಾಗಿದೆ. ಕಾಂಗ್ರೆಸ್​ ಯುವ ನಾಯಕ ಮತ್ತು ಮಾಜಿ ಉಪ ಮುಖ್ಯಮಂತ್ರಿ, ರಾಜಸ್ಥಾನ ಕಾಂಗ್ರೆಸ್​ನ ಮಾಜಿ ಅಧ್ಯಕ್ಷರೂ ಆಗಿರುವ ಸಚಿನ್​ ಪೈಲಟ್​ ಅವರು ಕಾಂಗ್ರೆಸ್​ ಬಿಡಲಿದ್ದಾರೆ.

ಜೂನ್​ 11ರಂದು ಹೊಸ ಪಕ್ಷ ಘೋಷಣೆ:

ಜೂನ್​ 11ರಂದು ಸಚಿನ್​ ಪೈಲಟ್​ ಅವರು ತಮ್ಮ ಹೊಸ ಪಕ್ಷವನ್ನು ಘೋಷಣೆ ಮಾಡಿದ್ದಾರೆ. ಹೊಸ ಪಕ್ಷಕ್ಕೆ ಪ್ರಗತಿಶೀಲ ಕಾಂಗ್ರೆಸ್​ ಎಂದು ನಾಮಕರಣ ಮಾಡಲಿದ್ದಾರೆ.

ಜೂನ್​ 11 ಸಚಿನ್​ ಪೈಲಟ್​ ಅವರ ತಂದೆ ರಾಜೇಶ್​ ಪೈಲಟ್​ ಅವರ ಪುಣ್ಯತಿಥಿ. 

ಪ್ರಶಾಂತ್​ ಕಿಶೋರ್​ ಸಲಹೆ:

ಅಂದಹಾಗೆ ಕಾಂಗ್ರೆಸ್​ನಿಂದ ಹೊರಬಂದು ಹೊಸ ಪಕ್ಷ ರಚಿಸುವಂತೆ ಸಚಿನ್​ ಪೈಲಟ್​​ಗೆ ಸಲಹೆ ಕೊಟ್ಟಿರುವುದು ಚುನಾವಣಾ ತಜ್ಞ ಪ್ರಶಾಂತ್​ ಕಿಶೋರ್​. 

ಅವರ ಮಾರ್ಗದರ್ಶನದಲ್ಲೇ ಪೈಲಟ್​ ಪಕ್ಷ ಸಂಘಟನೆಗೆ ಬೇಕಾಗಿರುವ ರಣತಂತ್ರಗಳನ್ನು ಮಾಡುತ್ತಿದ್ದಾರೆ.

ಎರಡು ಪಕ್ಷಗಳ ಜೊತೆಗೆ ಮೈತ್ರಿ:

ಹೊಸ ಪಕ್ಷ ಘೋಷಿಸಿದ ಬಳಿಕ ಪೈಲಟ್​ ಅವರು ಎರಡು ಪಕ್ಷಗಳ ಜೊತೆಗೆ ಮೈತ್ರಿ ಮಾಡಿಕೊಳ್ಳುವ ನಿರೀಕ್ಷೆ ಇದೆ. ಹನುಮಾನ್​ ಬೆನಿವಾಲ್​ ಅವರ ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ ಮತ್ತು ಆಮ್​ ಆದ್ಮಿ ಪಕ್ಷದ ಜೊತೆಗೆ ಚುನಾವಣಾ ಪೂರ್ವ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಈ ಮೂಲಕ ರಾಜಸ್ಥಾನದಲ್ಲೇ ತೃತೀಯ ರಂಗ ಅಸ್ತಿತ್ವಕ್ಕೆ ಬರುವ ನಿರೀಕ್ಷೆ ಇದೆ.

ಈಡೇರದ ಮೂರು ಬೇಡಿಕೆ:

ತಮ್ಮದೇ ಸರ್ಕಾರದ ವಿರುದ್ಧ ಸಿಡಿದೆದಿದ್ದ ಪೈಲಟ್​ ಅವರು ಸಿಎಂ ಅಶೋಕ್​ ಗೆಹ್ಲೋಟ್​ ಅವರ ಮುಂದೆ ಮೂರು ಬೇಡಿಕೆಗಳನ್ನಿಟ್ಟಿದ್ದರು. 1) ವಸುಂಧರಾ ರಾಜೆ ಸಿಎಂ ಆಗಿದ್ದ ಅವಧಿಯಲ್ಲಿ ನಡೆದಿದ್ದ ಭ್ರಷ್ಟಾಚಾರದ ಬಗ್ಗೆ ತನಿಖೆ ಆಗ್ಬೇಕು. 2) ರಾಜಸ್ಥಾನ ಲೋಕಸೇವಾ ಆಯೋಗವನ್ನು ಪುನರ್​ರಚನೆ ಮಾಡ್ಬೇಕು 3) ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ತೊಂದರೆ ಅನುಭವಿಸಿರುವ ಅಭ್ಯರ್ಥಿಗಳಿಗೆ ಪರಿಹಾರ ನೀಡ್ಬೇಕು. 

ಈ ಬೇಡಿಕೆಗಳ ಜಾರಿಗೆ ಮೇ 31ರವರೆಗೆ ಗಡುವು ನೀಡಿದ್ದರು. ಆದರೆ ಆ ಬೇಡಿಕೆ ಈಡೇರಲಿಲ್ಲ.

ಸರ್ಕಾರದ ವಿರುದ್ಧವೇ ಹೋರಾಟ:

ತಮ್ಮದೇ ಕಾಂಗ್ರೆಸ್​ ಸರ್ಕಾರದ ವಿರುದ್ಧ ಸಚಿನ್​ ಪೈಲಟ್​ ಅವರು ಏಪ್ರಿಲ್​ 11ರಂದು ಒಂದು ದಿನ ಉಪವಾಸ ಸತ್ಯಾಗ್ರಹ ಮತ್ತು ಮೇ 11ರಿಂದ ಐದು ದಿನ ಪಾದಯಾತ್ರೆ ಕೈಗೊಂಡಿದ್ದರು.

ರಾಹುಲ್​ ಸಂಧಾನ ವಿಫಲ:

ಮೇ 29ರಂದು ನವದೆಹಲಿಯಲ್ಲಿ ಕಾಂಗ್ರೆಸ್​ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಸಿಎಂ ಅಶೋಕ್​ ಗೆಹ್ಲೋಟ್​ ಮತ್ತು ಸಚಿನ್​ ಪೈಲಟ್​ ಅವರಿಬ್ಬರನ್ನು ಕೂರಿಸಿ ಮುಖಾಮುಖಿ ಮಾತುಕತೆ ನಡೆಸಲಾಗಿತ್ತು.

ಈ ಸಭೆಯಲ್ಲೇ ರಾಹುಲ್​ ಗಾಂಧಿ ಅವರು ಪೈಲಟ್​ ಅವರಿಗೆ  ನಿಮ್ಮ ಜೊತೆಗೆ ನಾನಿದ್ದೇನೆ, ಆದ್ರೆ ಈಗ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವಲ್ಲಿ ಇಬ್ಬರೂ ಜೊತೆಯಾಗಿ ಕೆಲಸ ಮಾಡಿ ಎಂದು ಸೂಚಿಸಿದ್ದರು. ಆದರೆ ಆ ಸಂಧಾನ ಫಲಕೊಟ್ಟಿಲ್ಲ.