ನಗರದ ಜ್ಯೋತಿಷಿ ಪ್ರಮೋದ್ ಅವರ ಚಿನ್ನಾಭರಣ ದೋಚಿದ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಲಕ್ಷ್ಮಣ್ ನಿಂಬರ್ಗಿ ತಿಳಿಸಿದ್ದಾರೆ.
ಆಡುಗೋಡಿಯ ವಿನಾಯಕ ನಗರದ ಡಾಮಿನಿಕ್ ರಿಚರ್ಡ್, ಮೇಘನಾ, ರಾಜು, ಸುರೇಶ್, ಪಥಮ್ ಹಾಗೂ ವಿನೋದ್ ಬಂಧಿತ ಆರೋಪಿಗಳು.
ಆರೋಪಿ ಮೇಘನಾ ನಾಲ್ಕೈದು ತಿಂಗಳ ಹಿಂದೆ ಜ್ಯೋತಿಷ್ಯ ಕೇಳಲು ಪ್ರಮೋದ್ ಬಳಿ ಬಂದಿದ್ದು, ಬಳಿಕ ಆತ್ಮೀಯತೆ ಬೆಳೆಸಿಕೊಂಡಿದ್ದಾಳೆ. ಅದೇ ಸುಲುಗೆ ಮೇರೆಗೆ ಇತ್ತೀಚಿಗೆ ಜ್ಯೋತಿಷ್ಯಿ ಬಳಿ ಹಣದ ಸಹಾಯ ಕೇಳಿದ್ದು, ಆದರೆ ಜ್ಯೋತಿಷ್ಯಿ ಪ್ರಮೋದ್ ಸದ್ಯ ಹಣವಿಲ್ಲ ಮುಂದೆ ನೋಡೋಣ ಎಂದಿದ್ದರು ಎನ್ನಲಾಗಿದೆ.
ಪ್ರಮೋದ್ ಬಳಿಯಿದ್ದ ಆಭರಣಗಳನ್ನ ನೋಡಿ ದರೋಡೆಗೆ ಸಂಚು ರೂಪಿಸಿದ್ದ ಮೇಘನಾ, ತನ್ನದೇ ಏರಿಯಾದ ಯುವಕರನ್ನು ಒಟ್ಟುಗೂಡಿಸಿ ದರೋಡೆಗೆ ಸ್ಕೆಚ್ ರೂಪಿಸಿದ್ದಳು. ಅದರಂತೆ ಜುಲೈ 9ರಂದು ಜ್ಯೋತಿಷಿಯ ಮನೆಗೆ ನುಗ್ಗಿ ಪ್ರಮೋದ್ ಕೈ ಕಾಲು ಕಟ್ಟಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.
ಸದ್ಯ ಪ್ರಕರಣದ ಆರೋಪಿಗಳನ್ನು ಬಂಧಿಸಲಾಗಿದ್ದು 22 ಲಕ್ಷ 55 ಸಾವಿರ ರೂ.ಮೌಲ್ಯದ ಚಿನ್ನಾಭರಣ, 66 ಸಾವಿರ ನಗದು ಮತ್ತು ಒಂದು ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.