ಅಪ್ರಾಪ್ತೆ ಮೇಲೆ ಆಕೆ ಕೆಲಸ ಮಾಡುತ್ತಿದ್ದ ಕಾರ್ಖಾನೆಯೊಂದರ ಮ್ಯಾನೇಜರ್ ಅತ್ಯಾಚಾರವೆಸಗಿ ಬಲವಂತವಾಗಿ ಆ್ಯಸಿಡ್ ಕುಡಿಸಿದ ಘಟನೆ ನವದೆಹಲಿಯಲ್ಲಿ ನಡೆದಿದೆ.
ಕಾರ್ಖಾನೆಯ ಮ್ಯಾನೇಜರ್ ಜೈಪ್ರಕಾಶ್(31) ಬಂಧಿತ ಆರೋಪಿ. 15 ವರ್ಷದ ಬಾಲಕಿಯೊಬ್ಬಳು ಶೂ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಳು. ಅಲ್ಲಿನ ಮ್ಯಾನೇಜರ್ ಆಗಿ ಜೈಪ್ರಕಾಶ್ ಕೆಲಸ ಮಾಡುತ್ತಿದ್ದ. ಈತ ಆಕೆಯ ಬಳಿ ಬಂದು ಅನಾರೋಗ್ಯದಿಂದ ಬಳಲುತ್ತಿರುವ ಪತ್ನಿಯನ್ನು ಭೇಟಿ ಮಾಡಿಸುತ್ತೇನೆ ಎಂದು ನೆಪ ಹೇಳಿದ. ಇದನ್ನು ನಂಬಿದ ಆಕೆಯನ್ನು ತನ್ನ ಮನೆಗೆ ಕರೆದುಕೊಂಡು ಬಂದಿದ್ದಾನೆ. ಅಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಅಷ್ಟೇ ಅಲ್ಲದೇ ಯಾರಿಗೂ ಹೇಳದಂತೆ ಬೆದರಿಕೆಯನ್ನು ಹಾಕಿದ್ದಾನೆ.
ಇದಾದ ಬಳಿಕ ಮನೆಗೆ ಹೋಗುತ್ತಿದ್ದ ರಸ್ತೆಯಲ್ಲಿ ಆಕೆಯನ್ನು ಜೈಪ್ರಕಾಶ್ ತಡೆದಿದ್ದಾನೆ. ರಸ್ತೆಯಲ್ಲೇ ಆಕೆಗೆ ಬಲವಂತವಾಗಿ ಆ್ಯಸಿಡ್ನ್ನು ಕುಡಿಸಿದ್ದಾನೆ. ಇದರಿಂದಾಗಿ ಆಕೆ ಮನೆಗೆ ತಲುಪುತ್ತಿದ್ದಂತೆ ಪ್ರಜ್ಞಾಹೀನಳಾಗಿದ್ದಾಳೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಕೆ ಗಂಭೀರ ಸ್ಥಿತಿಯಲ್ಲಿದ್ದರಿಂದ ಎಮ್ಸ್ಗೆ ದಾಖಲಿಸಲಾಗಿದೆ.
ಈ ಸಂಬಂಧ ದೆಹಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲು ಪ್ರಯತ್ನಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಜೈಪ್ರಕಾಶ್ನನ್ನು ಬಂಧಿಸಲಾಗಿದೆ.