ಪಬ್ನಲ್ಲಿ ಹಲ್ಲೆ ನಡೆಸಿದ್ದ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದ ಮಹಮ್ಮದ್ ನಲಪಾಡ್ಗೆ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಸ್ಥಾನ ನೀಡಲು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನಿರ್ಧರಿಸಿದ್ದಾರೆ. ಮುಂದಿನ ವರ್ಷದ ಫೆಬ್ರವರಿಯಲ್ಲಿ ನಲಪಾಡ್ಗೆ ಯುವ ಅಧ್ಯಕ್ಷ ಗಾದಿ ಬಿಟ್ಟುಕೊಡುವಂತೆ ರಕ್ಷಾ ರಾಮಯ್ಯ ಅವರಿಗೆ ಸೂಚಿಸಿದ್ದಾರೆ.
ಈ ಮೂಲಕ ಕರ್ನಾಟಕ ಕಾಂಗ್ರೆಸ್ ಘಟಕ ಮತ್ತು ಯುವ ಕಾಂಗ್ರೆಸ್ ಘಟಕ ಎರಡಕ್ಕೂ ಜೈಲಿಗೆ ಹೋಗಿ ಬಂದವರೇ ಅಧ್ಯಕ್ಷರು ಎಂಬ ವಿಡಂಬನೆಗೆ ಕಾಂಗ್ರೆಸ್ ಈಡಾಗಲಿರುವುದು ನಿಜ. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಡಿಕೆಶಿ ತಿಹಾರ್ ಜೈಲುವಾಸಿಯಾಗಿದ್ದರು.
ಈ ಮೂಲಕ ಸಿದ್ದರಾಮಯ್ಯ ಬಣದ ರಕ್ಷಾ ರಾಮಯ್ಯ ಅವರನ್ನು ಎರಡು ವರ್ಷಕ್ಕೂ ಮೊದಲೇ ಅಧಿಕಾರದಿಂದ ಇಳಿಸಿ ತಮ್ಮ ಶಿಷ್ಯ ನಲಪಾಡ್ಗೆ ಪಟ್ಟ ಕಟ್ಟುವ ಡಿಕೆಶಿ ಕಸರತ್ತು ಯಶಸ್ವಿ ಆಗಿದ್ದು, ಸಿದ್ದರಾಮಯ್ಯಗೆ ಡಿಕೆಶಿ ಮತ್ತೊಂದು ಆಘಾತ ನೀಡಿದ್ದಾರೆ.
ಇವತ್ತು ನಲಪಾಡ್ ಮತ್ತು ರಕ್ಷಾ ರಾಮಯ್ಯ ಜೊತೆಗೆ ಡಿಕೆಶಿ ಮಾತುಕತೆ ನಡೆಸಿದರು. ಫೆಬ್ರವರಿಗೆ ನಲಪಾಡ್ಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡುವಂತೆ ಸೂಚಿಸಿರುವ ಡಿಕೆಶಿ ಉಳಿದ 2 ವರ್ಷ ನಲಪಾಡ್ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷರಾಗಲಿದ್ದಾರೆ ಎಂದು ಸಭೆಯಲ್ಲಿ ತಿಳಿಸಿದ್ದಾರೆ ಎಂದು ವರದಿ ಆಗಿದೆ. ನಲಪಾಡ್ಗೆ ಅಧ್ಯಕ್ಷ ಸ್ಥಾನ ಕೊಡಿಸುವುದಕ್ಕಾಗಿ ಡಿಕೆಶಿ ದೆಹಲಿ ಹೈಕಮಾಂಡ್ ಎದುರು ಇನ್ನಿಲ್ಲದ ಕಸರತ್ತು ನಡೆಸಿದ್ದರು.