ದೇಶದ 25ನೇ ಮುಖ್ಯ ಚುನಾವಣಾ ಆಯುಕ್ತರಾಗಿ ರಾಜೀವ್ ಕುಮಾರ್ ದೆಹಲಿಯ ನಿರ್ವಾಚನ ಸದನದಲ್ಲಿಂದು ಅಧಿಕಾರ ವಹಿಸಿಕೊಂಡರು. ಮೇ 14 ರಂದು ಸುಶೀಲ್ ಚಂದ್ರ ಅವರು ಅಧಿಕಾರದಿಂದ ನಿರ್ಗಮಿಸಿದ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಕುಮಾರ್ ಅವರನ್ನು ಗುರುವಾರ ನೇಮಕ ಮಾಡಲಾಗಿತ್ತು.
ಮೇ 15 ರಿಂದ ಅನ್ವಯವಾಗುವಂತೆ ರಾಜೀವ್ ಕುಮಾರ್ ಅವರನ್ನು ದೇಶದ ಚುನಾವಣಾ ಆಯೋಗದ ಮುಖ್ಯ ಆಯುಕ್ತರನ್ನಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇಮಕ ಮಾಡಿರುವುದಾಗಿ ನೋಟಿಫಿಕೇಷನ್ ನಲ್ಲಿ ಹೇಳಲಾಗಿತ್ತು.
ಫೆಬ್ರವರಿ 2025ರವರೆಗೂ ಕುಮಾರ್ ಅವರ ಅಧಿಕಾರವಧಿ ಇರುವ ಸಾಧ್ಯತೆಯಿದೆ. 2024ರ ಲೋಕಸಭಾ ಚುನಾವಣೆ, ರಾಷ್ಟ್ರಪತಿ ಚುನಾವಣೆ, ಉಪ ರಾಷ್ಟ್ರಪತಿ ಚುನಾವಣೆ ಸೇರಿದಂತೆ ಅನೇಕ ರಾಜ್ಯಗಳ ವಿಧಾನಸಭಾ ಚುನಾವಣೆಯ ಮೇಲ್ವಿಚಾರಣೆ ಮಾಡಲಿದ್ದಾರೆ.
1984ರ ಬ್ಯಾಚಿನ ಬಿಹಾರ್/ ಜಾರ್ಖಂಡ್ ಕೇಡರ್ ನ ಐಐಎಸ್ ಅಧಿಕಾರಿಯಾಗಿರುವ ರಾಜೀವ್ ಕುಮಾರ್, ಸಾರ್ವಜನಿಕ ಉದ್ಯಮ ಆಯ್ಕೆ ಮಂಡಳಿ ಮುಖ್ಯಸ್ಥ ಸೇರಿದಂತೆ ಹಲವು ಪ್ರಮುಖ ಸ್ಥಾನಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.