Rahul Gandhi: ವಯನಾಡು ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಾ..?

ಮಾನನಷ್ಟ ಮೊಕದ್ದಮೆಯಲ್ಲಿ ಗುಜರಾತ್​ ಉಚ್ಛ ನ್ಯಾಯಾಲಯದ ಆದೇಶದ ವಿರುದ್ಧ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರು ಸರ್ವೋಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.

ಈ ಮೇಲ್ಮನವಿಯಲ್ಲಿ ರಾಹುಲ್​ ಅವರು ಎರಡು ಮನವಿಗಳನ್ನು ಮಾಡಿದ್ದಾರೆ.

ದೋಷಿ ಎಂದು ಘೋಷಿಸಿ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ ಸೂರತ್​ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದು ಮೇಲ್ಮನವಿಯನ್ನು ವಜಾಗೊಳಿಸಿದ್ದ ಗುಜರಾತ್​ ಉಚ್ಛ ನ್ಯಾಯಾಲಯದ ಆದೇಶವನ್ನು ತಡೆ ಹಿಡಿಯಬೇಕು.

ಸುಪ್ರೀಂಕೋರ್ಟ್​ನಲ್ಲಿ ಮೇಲ್ಮನವಿ ಅರ್ಜಿ ವಿಚಾರಣೆ ಮುಗಿಯುವರೆಗೆ ಗುಜರಾತ್​ ಹೈಕೋರ್ಟ್​ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಮತ್ತು ದೋಷಿ ಎಂದು ನೀಡಲಾಗಿರುವ ಆದೇಶಕ್ಕೆ ತಡೆ ನೀಡಬೇಕು.

ಉಪ ಚುನಾವಣೆ ಘೋಷಿಸಬಹುದು:

ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡು 112 ದಿನಗಳಾಗಿವೆ ಮತ್ತು ಯಾವುದೇ ಕ್ಷಣದಲ್ಲಾದರೂ ಚುನಾವಣಾ ಆಯೋಗ ವಯನಾಡು ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಿಸಬಹುದು. ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 20ರಿಂದ ಆರಂಭವಾಗಲಿದೆ ಮತ್ತು ಮಧ್ಯಂತರ ಪರಿಹಾರ ಸಿಗದೇ ಹೋದರೆ ಆ ಕಲಾಪಗಳಲ್ಲಿ ಭಾಗವಹಿಸುವ ಮತ್ತು ನನ್ನ ಪಕ್ಷ ಮತ್ತು ಕ್ಷೇತ್ರವನ್ನು ಪ್ರತಿನಿಧಿಸುವ ಅವಕಾಶದಿಂದ ವಂಚಿತನಾಗುತ್ತೇನೆ

ಎಂದು ಸುಪ್ರೀಂಕೋರ್ಟ್​ಗೆ ಸಲ್ಲಿಸಿರುವ ಮೇಲ್ಮನವಿಯಲ್ಲಿ ರಾಹುಲ್​ ಗಾಂಧಿ ವಾದಿಸಿದ್ದಾರೆ.

ಉಪ ಚುನಾವಣೆ ಯಾವಾಗ..?

ಜನಪ್ರತಿನಿಧಿ ಕಾಯ್ದೆಯ ಕಲಂ 151ಎ ಅಡಿಯಲ್ಲಿ ಖಾಲಿ ಆಗಿರುವ ಲೋಕಸಭಾ ಅಥವಾ ರಾಜ್ಯಸಭಾ ಮತ್ತು ವಿಧಾನಸಭೆ ಅಥವಾ ವಿಧಾಪರಿಷತ್​ ಸ್ಥಾನಗಳಿಗೆ ಅವುಗಳು ಖಾಲಿ ಆದ ದಿನದಿಂದ 6 ತಿಂಗಳೊಳಗೆ ಉಪ ಚುನಾವಣೆ ನಡೆಸಬೇಕು.

ಸಂಸದ ಅಥವಾ ಶಾಸಕ ಅಥವಾ ಎಂಎಲ್​ಸಿಗಳ ರಾಜೀನಾಮೆ, ಮರಣ ಅಥವಾ ಅನರ್ಹತೆ ಕಾರಣದಿಂದ ಸದಸ್ಯತ್ವ ಖಾಲಿಯಾದರೆ ಉಪ ಚುನಾವಣೆ ನಡೆಯುತ್ತದೆ.

ಸದಸ್ಯ ಸ್ಥಾನ ಖಾಲಿ ಆದ ದಿನದಿಂದ ಒಂದು ವೇಳೆ ಲೋಕಸಭೆ ಅಥವಾ ವಿಧಾನಸಭೆಯ ಅವಧಿ ಮುಗಿಯಲು 1 ವರ್ಷಕ್ಕಿಂತ ಹೆಚ್ಚು ಸಮಯ ಇದ್ದರೆ ಉಪ ಚುನಾವಣೆ ನಡೆಸಬೇಕಾಗುತ್ತದೆ.

ವಯನಾಡು ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಾ..?

ರಾಹುಲ್​ ಗಾಂಧಿ ಅವರು ಲೋಕಸಭಾ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದು ಮಾರ್ಚ್​ 23. ಈಗಾಗಲೇ 113 ದಿನಗಳಾಗಿವೆ.

17ನೇ ಲೋಕಸಭೆಯ ಅವಧಿ ಮುಗಿಯುವುದು ಮುಂದಿನ ವರ್ಷದ ಅಂದರೆ 2024ರ ಜೂನ್​ 16ರಂದು. ಅಂದರೆ ರಾಹುಲ್​ ಅವರ ಅನರ್ಹತೆ ಮತ್ತು ಹಾಲಿ ಲೋಕಸಭೆಯ ಅವಧಿ ಮುಕ್ತಾಯದ ನಡುವೆ ಕನಿಷ್ಠ 15 ತಿಂಗಳ ಅಂತರವಿದೆ. 

ಉಪ ಚುನಾವಣೆ ಘೋಷಿಸಿ ಅಧಿಸೂಚನೆ ಹೊರಡಿಸುವ ದಿನಾಂಕದಿಂದ ಚುನಾವಣಾ ಪ್ರಕ್ರಿಯೆ ಮುಗಿಸಲು ಚುನಾವಣಾ ಆಯೋಗಕ್ಕೆ 1 ತಿಂಗಳು ಕಾಲಾವಕಾಶ ಬೇಕಾಗುತ್ತದೆ. 

ಹೀಗಾಗಿ ಒಂದು ವೇಳೆ ರಾಹುಲ್​ ಗಾಂಧಿ ಅವರ ಅರ್ಜಿ ಪರಿಗಣಿಸಿ  ದೋಷಿ ಎಂಬ ತೀರ್ಪಿಗೆ ಸುಪ್ರೀಂಕೋರ್ಟ್​ ತಡೆಯಾಜ್ಞೆ ನೀಡದೇ ಇದ್ದರೆ ಆಗ  ಚುನಾವಣಾ ಆಯೋಗ ಉಪ ಚುನಾವಣೆ ಘೋಷಿಸಿದರೂ ಅಚ್ಚರಿಯೇನಿಲ್ಲ.

LEAVE A REPLY

Please enter your comment!
Please enter your name here