ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಲೋಕಸಭಾ ಸಂಸದ ಅನರ್ಹತೆ ಇವತ್ತು ಸಂಜೆ ವೇಳೆಗೆ ರದ್ದಾಗಲಿದೆ ಎಂದು ಮೂಲಗಳು ತಿಳಿಸಿವೆ.
ಅನರ್ಹತೆ ಆದೇಶವನ್ನು ರದ್ದುಪಡಿಸಿ ಇವತ್ತೇ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಆದೇಶಿಸುವ ಸಾಧ್ಯತೆ ಇದೆ. ಈ ಮೂಲಕ ರಾಹುಲ್ ಗಾಂಧಿ ಅವರಿಗೆ ಮತ್ತೆ ಲೋಕಸಭಾ ಸಂಸದ ಸ್ಥಾನ ಮಾನ್ಯತೆ ಸಿಗಲಿದೆ.
ಸುಪ್ರೀಂಕೋರ್ಟ್ನ ಮೂವರು ನ್ಯಾಯಮೂರ್ತಿಗಳ ಪೀಠ ರಾಹುಲ್ ಗಾಂಧಿ ಅವರು ದೋಷಿ ಎಂದು ಸೂರತ್ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ತಡೆ ನೀಡಿತ್ತು.
ಲೋಕಪ್ರಹಾರಿ ಮತ್ತು ಚುನಾವಣಾ ಆಯೋಗದ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪಿನ ಪ್ರಕಾರ ಒಂದು ವೇಳೆ ದೋಷಿ ಎಂಬ ತೀರ್ಪಿಗೆ ತಡೆಯಾಜ್ಞೆ ಸಿಕ್ಕ ತಕ್ಷಣವೇ ಅನರ್ಹತೆ ರದ್ದಾಗಿ ಶಾಸಕ ಅಥವಾ ಸಂಸದ ಸದಸ್ಯತ್ವ ಮತ್ತೆ ಸಿಗಲಿದೆ.
ಒಂದು ವೇಳೆ ಇವತ್ತು ಲೋಕಸಭಾ ಸ್ಪೀಕರ್ ಅನರ್ಹತೆ ರದ್ದುಗೊಳಿಸದೇ ಹೋದರೆ ನಾಳೆ ಕಾಂಗ್ರೆಸ್ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಲು ತೀರ್ಮಾನಿಸಿದೆ.
ನಾಳೆಯಿಂದ ಆಗಸ್ಟ್ 11ರವರೆಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಅವಿಶ್ವಾಸ ಗೊತ್ತುವಳಿ ಮೇಲೆ ಚರ್ಚೆ ನಡೆಯಲಿರುವ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅನರ್ಹತೆ ರದ್ದು ಮಹತ್ವ ಪಡೆದಿದೆ.
ಮಾರ್ಚ್ 23ರಂದು ಸೂರತ್ ನ್ಯಾಯಾಲಯದ ಆದೇಶ ಬೆನ್ನಲ್ಲೇ ರಾಹುಲ್ ಲೋಕಸಭಾ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದರು.
ಅನರ್ಹತೆ ರದ್ದಾದರೆ ರಾಹುಲ್ ಅವರು ಮತ್ತೆ ಲೋಕಸಭಾ ಕಲಾಪಗಳಲ್ಲಿ ಭಾಗವಹಿಸಬಹುದು ಮತ್ತು ಪ್ರಧಾನಿ ಮೋದಿ ಸರ್ಕಾರದ ವೈಫಲ್ಯಗಳನ್ನು ಸದನದಲ್ಲೇ ಎತ್ತಿಹಿಡಿಯುವ ಅವಕಾಶ ಸಿಗಲಿದೆ.
ಆಗಸ್ಟ್ 11ರಂದು ಸಂಸತ್ತಿನ ಮಳೆಗಾಲದ ಅಧಿವೇಶನ ಅಂತ್ಯವಾಗಲಿದೆ.
ADVERTISEMENT
ADVERTISEMENT