ಪಕ್ಷದಲ್ಲಿ ಒಬ್ಬ ವ್ಯಕ್ತಿಗೆ ಒಂದು ಹುದ್ದೆ ನಿಯಮಕ್ಕೆ ರಾಹುಲ್ ಬದ್ಧ : ಅಶೋಕ್ ಗೆಹ್ಲೋಟ್​ಗೆ ಹಿನ್ನಡೆ

ರಾಜಸ್ಥಾನದ ಉದಯಪುರದ ಚಿಂತನ್ ಶಿಬಿರದಲ್ಲಿ ತೆಗೆದುಕೊಂಡ ಒಬ್ಬ ವ್ಯಕ್ತಿಗೆ ಒಂದು ಹುದ್ದೆ ಎಂಬ ನಿರ್ಣಯವನ್ನು ಎಲ್ಲರೂ ಅನುಸರಿಸುವ ನಿರೀಕ್ಷೆಯಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಗುರುವಾರ ಹೇಳಿದ್ದಾರೆ. ಆ ಮೂಲಕ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ರೇಸ್ ನಲ್ಲಿ ಮುಂಚೂಣಿಯಲ್ಲಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ತೀವ್ರ ಹಿನ್ನಡೆಯಾಗಿದೆ. ಗೆಹ್ಲೋಟ್‌ ಅವರು ಮುಖ್ಯಮಂತ್ರಿ ಹುದ್ದೆಯ ಜೊತೆಗೆ ಕಾಂಗ್ರೆಸ್ ಅಧ್ಯಕ್ಷರ ಗಾಧಿ ನಿಭಾಯಿಸುವ ವಿಶ್ವಾಸದಲ್ಲಿದ್ದರು.

ಭಾರತ್ ಜೋಡೋ ಯಾತ್ರೆಯ ಮೊದಲ ಮತ್ತು ಎರಡನೇ ಹಂತದ ನಡುವೆ ಇಂದು ಪತ್ರಿಕಾಗೋಷ್ಠಿಯಲ್ಲಿ ವರದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಕೇವಲ ಸಾಂಸ್ಥಿಕ ಸ್ಥಾನವಲ್ಲ, ಅದು ಸೈದ್ಧಾಂತಿಕ ಹುದ್ದೆ ಮತ್ತು ನಂಬಿಕೆಯ ವ್ಯವಸ್ಥೆಯಾಗಿದೆ ಎಂದಿದ್ದಾರೆ.

ನಾವು ಉದಯಪುರದಲ್ಲಿ ಏನು ನಿರ್ಧರಿಸಿದ್ದೇವೆ, ಆ ಬದ್ಧತೆಯನ್ನು ಉಳಿಸಿಕೊಳ್ಳಬೇಕೆಂದು ನಾವು ನಿರೀಕ್ಷಿಸುತ್ತೇವೆ. ಉದಯಪುರ ಚಿಂತನ ಶಿಬಿರದಲ್ಲಿ ಒಬ್ಬ ವ್ಯಕ್ತಿಗೆ, ಒಂದು ಹುದ್ದೆ ನಿಯಮ ಜಾರಿಗೊಳಿಸುವ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದರು.

ಪಕ್ಷದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಗಳಿಗೆ ಅವರು ನೀಡಿದ ಮತ್ತೊಂದು ಸಲಹೆಯೆಂದರೆ, ನೀವು ಐತಿಹಾಸಿಕ ಸ್ಥಾನವನ್ನು ತೆಗೆದುಕೊಳ್ಳುತ್ತಿದ್ದೀರಿ. ಭಾರತದ ನಿರ್ದಿಷ್ಟ ದೃಷ್ಟಿಕೋನವನ್ನು ವ್ಯಾಖ್ಯಾನಿಸುವ ಸ್ಥಾನ ಅದು ಎಂದಿದ್ದಾರೆ.

LEAVE A REPLY

Please enter your comment!
Please enter your name here