ವಿಧಾನಸಭಾ ಉಪ ಸಭಾಧ್ಯಕ್ಷ ಹುದ್ದೆ ತಿರಸ್ಕರಿಸಿದ ಏಕೈಕ ಉಪ್ಪಾರ ಶಾಸಕ

ಸಚಿವ ಸ್ಥಾನ ಸಿಗದ ಕಾರಣ ಮುನಿಸಿಕೊಂಡಿರುವ ಚಾಮರಾಜನಗರ ಕ್ಷೇತ್ರದ ಕಾಂಗ್ರೆಸ್​ ಶಾಸಕ, ಮಾಜಿ ಸಚಿವ ಪುಟ್ಟರಂಗಶೆಟ್ಟಿ ಅವರು ವಿಧಾನಸಭೆಯ ಉಪ ಸಭಾಧ್ಯಕ್ಷ ಹುದ್ದೆಯನ್ನು ತಿರಸ್ಕರಿಸಿದ್ದಾರೆ.

ಡೆಪ್ಯುಟಿ ಸ್ಪೀಕರ್ ಸ್ಥಾನ ಒಪ್ಪಿಕೊಳ್ಳಲ್ಲ, ಶಾಸಕನಾಗಿಯೇ ಮುಂದುವರಿಯುತ್ತೇನೆ ಎಂದು ಚಾಮರಾಜನಗರದ ಉಪ್ಪಿನ ಮೋಳೆಯಲ್ಲಿರುವ ತಮ್ಮ ನಿವಾಸದಲ್ಲಿ ಶಾಸಕ ಪುಟ್ಟರಂಗಶೆಟ್ಟಿ ಹೇಳಿದ್ದಾರೆ.

ವಿಧಾನಸಭೆಯ ಉಪ ಸಭಾಧ್ಯಕ್ಷನಾದರೆ ಕ್ಷೇತ್ರದ ಜನರ ಆಶೋತ್ತರಗಳಿಗೆ ಸ್ಪಂದಿಸುವುದು ಕಷ್ಟವಾಗಲಿದೆ, ಡೆಪ್ಯುಟಿ ಸ್ಪೀಕರ್ ಸ್ಥಾನ ಕಾರ್ಯಭಾರದ ಒತ್ತಡದಿಂದ ಕ್ಷೇತ್ರದ ಕೆಲಸ ಮಾಡಲು ಕಷ್ಟವಾಗುತ್ತೆ.

ಡೆಪ್ಯುಟಿ ಸ್ಪೀಕರ್ ಆದರೆ ಕ್ಷೇತ್ರದ ಜನರ ಕೈಗೆಟುಕುವುದಿಲ್ಲ. ಹಾಗಾಗಿ ಡೆಪ್ಯುಟಿ ಸ್ಪೀಕರ್ ಸ್ಥಾನ ಬೇಡ ಎಂಬುದು ಕ್ಷೇತ್ರದ ಮತದಾರರು ಹಾಗು ಬೆಂಬಲಿಗರ ಒತ್ತಾಯವಾಗಿದೆ

ಎಂದು ಪುಟ್ಟರಂಗಶೆಟ್ಟಿ ಅವರು ಹೇಳಿದ್ದಾರೆ.

ನಾನು ಉಪ್ಪಾರ ಸಮಾಜದ ಏಕೈಕ ಶಾಸಕ. ಯಾವಾಗಲೂ ಜನರ ಜೊತೆ ಬೆರೆತು ಕೆಲಸ ಮಾಡುವವನು. ಡೆಪ್ಯುಟಿ ಸ್ಪೀಕರ್ ಸ್ಥಾನ ಒಪ್ಪಿಕೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಮತ್ತು ಜಮೀರ್‌ ಅಹಮದ್ ಒತ್ತಾಯಿಸಿದ್ದರು.

ಈ ಮೊದಲು ನನಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದರು, ಆದರೆ ಕೊನೆ ಗಳಿಗೆಯಲ್ಲಿ ಕೈ ತಪ್ಪಲು ಕಾರಣ ಏನೆಂದು ಗೊತ್ತಿಲ್ಲ

ಎಂದು ಪುಟ್ಟರಂಗ ಶೆಟ್ಟಿ ಅವರು ಅಸಮಾಧಾನ ಹೊರಹಾಕಿದ್ದಾರೆ.