ADVERTISEMENT
ಬಿಜೆಪಿ (BJP) ಸರ್ಕಾರದ ಅವಧಿಯಲ್ಲಿ ಆಗಿರುವ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ ಹಗರಣದಲ್ಲಿ (PSI Scam) ಬಿಜೆಪಿ ಶಾಸಕರೇ ಭಾಗಿಯಾಗಿದ್ದಾರೆ ಎಂಬ ಆರೋಪಕ್ಕೆ ಪುಷ್ಠಿ ನೀಡುವ ದೂರವಾಣಿ ಸಂಭಾಷಣೆಯ ಧ್ವನಿಮುದ್ರಿಕೆ ಲಭ್ಯವಾಗಿದೆ.
ಕೊಪ್ಪಳ (Koppal) ಜಿಲ್ಲೆಯ ಕನಕಗಿರಿ (Kanakagiri Assembly) ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ದುರ್ಗಪ್ಪ ದಡೇಸಗೂರು (BJP MLA BASAVARAJ DURUGAPPA DADESUGUR) ಅವರ ಜೊತೆಗೆ ಪಿಎಸ್ಐ ಪರೀಕ್ಷೆ ಬರೆದಿದ್ದ ಅಭ್ಯರ್ಥಿಯ ತಂದೆ ಮಾತಾಡಿರುವ ಆಡಿಯೋ ಬಹಿರಂಗ ಆಗಿದೆ.
ಒಂದೂವರೆ – ಎರಡು ವರ್ಷದಿಂದ ಹಿಂದೆ ತಮ್ಮ ಮಗನ ಪಿಎಸ್ಐ ನೇಮಕಾತಿಗಾಗಿ ಪರಸಪ್ಪ ಮೇಗೂರು ಎಂಬವರು ಶಾಸಕರ ದಡೇಸಗೂರು ಅವರಿಗೆ ದೂರವಾಣಿ ಕರೆ ಮಾಡಿ ಆ ಹಣವನ್ನು ವಾಪಸ್ ಕೊಡುವಂತೆ ಕೇಳಿದ್ದರು.
ಹಣ ವಾಪಸ್ ಕೊಡುವುದಾಗಿಯೂ ಹೇಳಿದರೂ ಹಣ ಸಿಗದ ಹಿನ್ನೆಲೆಯಲ್ಲಿ ಶಾಸಕ ದಡೇಸಗೂರು ಅವರ ಮನೆ ಬಾಗಿಲಿಗೆ ಹೋಗಿದ್ದರು ಪರಸಪ್ಪ ಮೇಗೂರು. ಆ ಬಳಿಕ ಇಬ್ಬರ ನಡುವೆಯೂ ದೂರವಾಣಿಯಲ್ಲಿ ವಾಗ್ವಾದ ನಡೆದಿತ್ತು.
ಶಾಸಕರ ಬಂಧನಕ್ಕೆ ಆಗ್ರಹ:
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (KPCC) ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಸಚಿವ ಎಂ ಬಿ ಪಾಟೀಲ್ (M B Patil) ಬಿಜೆಪಿ ಶಾಸಕ ಬಸವರಾಜ ದಡೇಸಗೂರು ಬಂಧನಕ್ಕೆ ಆಗ್ರಹಿಸಿದ್ದಾರೆ.
ಆಡಿಯೋದಲ್ಲಿ ಹಣ ಪಡೆದಿರುವುದನ್ನು ಶಾಸಕ ಬಸವರಾಜ ದಡೇಸಗೂರು ಒಪ್ಪಿಕೊಂಡಿದ್ದಾರೆ. ಶಾಸಕರನ್ನು ಬಂಧಿಸಿ ತನಿಖೆ ಮಾಡಬೇಕು. ಶೇಕಡಾ 40ರಷ್ಟು ಕಮಿಷನ್ ಹಗರಣದಲ್ಲಿ ಬಹುತೇಕ ಸಚಿವರು ಭಾಗಿ ಆಗಿದ್ದಾರೆ
ಎಂದು ಕೊಪ್ಪಳದಲ್ಲಿ ಪ್ರತಿಕ್ರಿಯಿಸಿದ್ದಾರೆ.
ADVERTISEMENT