545 ಪಿಎಸ್ಐ ನೇಮಕಾತಿ ಹಗರಣದಲ್ಲಿ ಭಾಗಿಯಾದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಅನುವಾಗುವಂತೆ ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಕ ಮಾಡಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಕಟಿಸಿದರು.
ಕಲಬುರಗಿಯ ತಾಜ ಸುಲ್ತಾನಪುರದಲ್ಲಿರುವ ಕೆಎಸ್ಆರ್ ಪಿ 6 ನೇ ಪಡೆಯ ಹೆಚ್ಚುವರಿ ತರಬೇತಿ ಶಾಲೆಯ ಆವರಣದಲ್ಲಿ ಶುಕ್ರವಾರ ನಡೆದ ವಿಶೇಷ ಮೀಸಲು ಪೊಲೀಸ್ ಕಾನ್ ಸ್ಟೆಬಲ್ ಪ್ರಶಿಕ್ಷಣಾರ್ಥಿಗಳ 4 ನೇ ತಂಡದ ನಿರ್ಗಮನ ಪಥ ಸಂಚಲನದಲ್ಲಿ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಈ ಹಿಂದೆ ಅನೇಕ ಪರೀಕ್ಷೆಗಳಲ್ಲಿ ಅಕ್ರಮ ನಡೆದಿದ್ದರೂ ತನಿಖೆ ಮಾಡಿರಲಿಲ್ಲ. ಒಂದು ವೇಳೆ ತನಿಖೆಯಾಗಿದ್ದರೆ ಈ ಪ್ರಕರಣ ನಡೆಯುತ್ತಿರಲಿಲ್ಲ. ಆದರೆ ಈ ವಿಷಯ ಗೊತ್ತಾದ ಎರಡು ಗಂಟೆಯೊಳಗೆ ವಿಶೇಷ ತಂಡ ರಚಿಸಿ ತನಿಖೆಗೆ ನಿರ್ದೇಶಿಸುವ ಮುಖಾಂತರ ಬದ್ಧತೆ ತೋರಿಸಿದ್ದೇವೆ. ಇಲ್ಲಿಯವರೆಗೆ 48 ಜನರನ್ನು ಬಂಧಿಸಲಾಗಿದೆ. ತನಿಖೆ ಆಳವಾಗಿ ನಡೆಯುತ್ತಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ನಿಶ್ಚಿತ ಎಂದರು.
ಪೊಲಿಸ್ ಇಲಾಖೆ ಬಲವರ್ಧನೆಗೆ ಸರ್ಕಾರ ಕ್ರಮ ಕೈಗೊಂಡಿದೆ. ಠಾಣೆಗಳ ಅಭಿವೃದ್ಧಿಗೆ 200 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. 400 ವಿಧಿ ವಿಜ್ಞಾನ ತಜ್ಞರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಇದೇ ವೇಳೆ ಹೇಳಿದರು.