ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಪ್ರಕಾಶ ಕಲ್ಲೂರ ಎಂಬ ಆರೋಪಿಯನ್ನು ಶುಕ್ರವಾರ ಬಂಧಿಸಿದ್ದಾರೆ.
ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದ ಆರೋಪಿ ರುದ್ರಗೌಡ ಡಿ.ಪಾಟೀಲ ಜೊತೆ ಹಲವು ವರ್ಷಗಳಿಂದ ಅಫಜಲಪುರ ತಾಲ್ಲೂಕಿನ ದೇಸಾಯಿ ಕಲ್ಲೂರ ಗ್ರಾಮದ ಪ್ರಕಾಶ ಕೆಲಸ ಮಾಡುತ್ತಿದ್ದ.
ಕಲಬುರ್ಗಿಯ ಎಚ್ಕೆಇ ಸಂಸ್ಥೆಯ ಎಂ.ಎಸ್.ಇರಾನಿ ಪದವಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಬ್ಲೂಟೂತ್ ಬಳಸಿ ಪರೀಕ್ಷೆ ಬರೆದಿದ್ದ ಪ್ರಭು ಎಂಬ ಅಭ್ಯರ್ಥಿಗೆ ಬ್ಲೂಟೂತ್ ಕೊಟ್ಟು, ಹಣ ಪಡೆದ ಆರೋಪ ಪ್ರಕಾಶ ಮೇಲಿದೆ ಎಂದು ಮೂಲಗಳು ತಿಳಿಸಿವೆ.
ಅಭ್ಯರ್ಥಿಗಳಿಗೆ ಬ್ಲೂಟೂತ್ ನೀಡಿ, ಅವರಿಂದ ಪಡೆದ ಹಣವನ್ನು ರುದ್ರಗೌಡಗೆ ತಲುಪಿಸುತ್ತಿದ್ದ. ವ್ಯವಹಾರಕ್ಕೂ ಮುನ್ನ ಅಭ್ಯರ್ಥಿಗಳು ಪ್ರಕಾಶ ಜೊತೆ ಮಾತನಾಡಬೇಕಿತ್ತು. ಸಿಐಡಿ ವಶದಲ್ಲಿರುವ ರುದ್ರಗೌಡ ನೀಡಿದ ಮಾಹಿತಿ ಆಧರಿಸಿ ಪ್ರಕಾಶ ರನ್ನು ಬಂಧಿಸಲಾಗಿದೆ. ಶುಕ್ರವಾರ ವಿಚಾರಣೆ ನಡೆಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ತಿಳಿದುಬಂದಿದೆ.