16 ನೇ ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ರಾಜ್ಯ ಜೆಡಿಎಸ್ ಪಕ್ಷದಿಂದ ಬೆಂಬಲ ಘೋಷಣೆ ಮಾಡಲಾಗಿದೆ.
ಈ ಬಗ್ಗೆ ಇಂದು ಮಾಧ್ಯಮಗಳೊಂದಿಗೆ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾತನಾಡಿದ ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿಯವರು, ಎನ್ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಈಗಾಗಲೇ ಗೆಲುವು ದೊರಕಿದಂತೆಯೇ. ನಮ್ಮ ಪಕ್ಷದ ಬೆಂಬಲ ಬೇಕಿರಲಿಲ್ಲ. ಆದಾಗ್ಯೂ, ಅವರು ಬೆಂಬಲ ಕೇಳಿದ್ದಾರೆ ಅದು ಅವರ ಔದಾರ್ಯ.
ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಅವರಿಗೆ ಮುಮರ್ಮು ಅವರು ಎರಡು ಮೂರು ಬಾರಿ ಕರೆ ಮಾಡಿ ಬೆಂಬಲ ಕೇಳಿದ್ದಾರೆ. ಆದ್ದರಿಂದ ದ್ರೌಪದಿ ಮುರ್ಮು ಅವರಿಗೆ ನಮ್ಮ ಪಕ್ಷದಿಂದ ಬೆಂಬಲ ಘೋಷಣೆ ಮಾಡಲಾಗುವುದು ಎಂದು ಹೇಳಿದ್ದಾರೆ.
ದ್ರೌಪದಿ ಮುರ್ಮು ತಳಮಟ್ಟದ ಸಮುದಾಯದಿಂದ ಹೇಗೆ ಬೆಳೆದು ಬಂದಿದ್ದಾರೆ ಎಂಬುದನ್ನು ನಾನು ಅರಿತಿದ್ದೇನೆ. ಆದಿವಾಸಿ ಸಮುದಾಯದ ಮಹಿಳೆಯೊಬ್ಬಳು ಇಷ್ಟು ದೊಡ್ಡ ಮಟ್ಟದ ಸಾಧನೆ ಮಾಡಿರುವುದು ಸ್ಪೂರ್ತಿದಾಯಕ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಇದೇ ವೇಳೆ ಬಿಜೆಪಿಯ ಬಿ ಟೀಂ ಎಂಬ ಕಾಂಗ್ರೆಸ್ ಆರೋಪದ ಬಗ್ಗೆ ಮಾತನಾಡಿದ ಅವರು, ಇಲ್ಲಿ ಬಿಜೆಪಿ, ಕಾಂಗ್ರೆಸ್ ಎನ್ನುವ ಪ್ರಶ್ನೆಯೇ ಇಲ್ಲ. ರಾಷ್ಟ್ರಪತಿ ಚುನಾವಣೆಯಲ್ಲಿ ಬಿ ಟೀಂ ಎನ್ನುವ ಪ್ರಶ್ನೆಯೇ ಬರಲ್ಲ. ಬಿಜೆಪಿ ಬಿ ಟೀಂ ಎಂದು ಕಾಂಗ್ರೆಸ್ನವರು ಪ್ರಚಾರ ಪಡೆದುಕೊಳ್ಳುವುದು ಈ ಚುನಾವಣೆಗೆ ಅನ್ವಯ ಆಗೋಲ್ಲ ಎಂದು ಸಿದ್ದರಾಮಯ್ಯನವರ ಮೇಲೆ ಪರೋಕ್ಷವಾಗಿ ಚಾಟಿ ಬೀಸಿದ್ದಾರೆ.
ಎನ್ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಈಗಾಗಲೇ ಒಡಿಶಾದ ಪ್ರಾದೇಶಿಕ ಪಕ್ಷ ಬಿಜೆಡಿ ಹಾಗೂ ಆಂಧ್ರಪ್ರದೇಶದ ವೈಎಸ್ಆರ್ ಕಾಂಗ್ರೆಸ್ ಬೆಂಬಲ ಘೋಷಿಸಿವೆ. ಚುನಾವಣೆ ಹೊತ್ತಿಗೆ ಮತ್ತಷ್ಟು ಪಕ್ಷಗಳು ದ್ರೌಪದಿ ಮುರ್ಮು ಅವರಿಗೆ ಬೆಂಬಲ ಘೋಷಿಸಬಹುದು ಎನ್ನಲಾಗುತ್ತಿದೆ.