2022ನೇ ಸಾಲಿನ ರಾಷ್ಟ್ರಪತಿ ಚುನಾವಣೆಗೆ ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಒಡಿಶಾ ಮೂಲದ ಬುಡಕಟ್ಟು ಜನಾಂಗದ ಮಹಿಳೆ, ಜಾರ್ಖಂಡ್ ರಾಜ್ಯದ ಮಾಜಿ ರಾಜ್ಯಪಾಲೆ ದ್ರೌಪದಿ ಮುರ್ಮು ಅವರು ಇಂದು ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವ ಸಂಪುಟದ ಉನ್ನತ ಸಚಿವರು, ಬಿಜೆಪಿ ಮತ್ತು ಎನ್ ಡಿಎ ಮೈತ್ರಿಕೂಟದ ರಾಜ್ಯಗಳ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಇಂದು ಮಧ್ಯಾಹ್ನ ದೆಹಲಿಯ ಸಂಸತ್ ಭವನದಲ್ಲಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಹುದ್ದೆಗೆ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋಯವರು ಮುರ್ಮು ಅವರ ಮೊದಲ ಸಲಹೆಗಾರರಾಗಿದ್ದಾರೆ. ಇವರ ನಾಮಪತ್ರಕ್ಕೆ ಪ್ರಧಾನಿಯವರು ಮಾತ್ರವಲ್ಲದೆ, ಹಿರಿಯ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ನಾಮಪತ್ರಕ್ಕೆ ಸಹಿ ಹಾಕಿದ್ದಾರೆ. ಎಲ್ಲಾ ಬಿಜೆಪಿ ನೇತೃತ್ವದ ರಾಜ್ಯಗಳ ಮುಖ್ಯಮಂತ್ರಿಗಳು, ಹಾಗೆಯೇ ಪಕ್ಷದ ಮಹಿಳೆಯರು ಮತ್ತು ಬುಡಕಟ್ಟು ಸಂಸದರು ಮತ್ತು ಶಾಸಕರ ಸಂಪೂರ್ಣ ತಂಡ ಸಹ ಸಹಿ ಹಾಕಿದ್ದಾರೆ.
ಎನ್ಡಿಎ ಮೈತ್ರಿಕೂಟದ ಭಾಗವಾಗಿರದ ವೈಎಸ್ಆರ್ ಕಾಂಗ್ರೆಸ್ನ ವಿಜಯಸಾಯಿ ರೆಡ್ಡಿ ಮತ್ತು ಬಿಜೆಡಿ ನಾಯಕ ಸಸ್ಮಿತ್ ಪಾತ್ರಾ ಅವರು ದ್ರೌಪದಿ ಮುರ್ಮು ಅವರ ನಾಮನಿರ್ದೇಶನವನ್ನು ಬೆಂಬಲಿಸಲು ಇಂದು ಸಂಸತ್ತಿನಲ್ಲಿದ್ದರು.
ಎಐಎಡಿಎಂಕೆ ನಾಯಕ ಓ ಪನೀರ್ಸೆಲ್ವಂ ಮತ್ತು ಜೆಡಿಯುನ ರಾಜೀವ್ ರಂಜನ್ ಸಿಂಗ್ ಇಂದು ಬೆಳಗ್ಗೆಯೇ ಸಂಸತ್ತಿನಲ್ಲಿ ಹಾಜರಿದ್ದರು.
ಮುರ್ಮು ಅವರು ಆಯ್ಕೆಯಾದರೆ, ದೇಶದ ಮೊದಲ ಬುಡಕಟ್ಟು ಜನಾಂಗದ ರಾಷ್ಟ್ರಪತಿ ಮತ್ತು ಎರಡನೇ ಮಹಿಳೆ ಎನಿಸಿಕೊಳ್ಳಲಿದ್ದಾರೆ.