ಉಪ ಚುನಾವಣೆಯಲ್ಲಿನ ಗೆಲುವು ಯಡಿಯೂರಪ್ಪ ಗೆಲುವಲ್ಲ – ಪ್ರತಾಪ್‌ ಸಿಂಹ

ಉಪ ಚುನಾವಣೆಯಲ್ಲಿ ಬಿಜೆಪಿ ೧೫ರಲ್ಲಿ ೧೨ ಸ್ಥಾನಗಳನ್ನು ಗೆದ್ದು ಬೀಗಿದೆ. ಉಪ ಚುನಾವಣೆಯಲ್ಲಿ ಸಹಜವಾಗಿಯೇ ಪ್ರಧಾನಿ ನರೇಂದ್ರ ಮೋದಿ ಆಗಲಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಆಗಲಿ ಪ್ರಚಾರ ಮಾಡಿರಲಿಲ್ಲ ( ಈ ಹಿಂದೆಯೂ ಮಾಡಿಲ್ಲ.) ಮುಖ್ಯಮಂತ್ರಿ ಯಡಿಯೂರಪ್ಪ ಅಬ್ಬರದ ಪ್ರಚಾರ ಮತ್ತು ಯಡಿಯೂರಪ್ಪ ಹೆಸರು ಹೇಳಿಕೊಂಡೇ ಅನರ್ಹರು ಅರ್ಹರಾಗಿ ಮತ್ತೆ ವಿಧಾನಸಭೆಗೆ ಪ್ರವೇಶಿಸಿದ್ದಾರೆ.

ಈ ಫಲಿತಾಂಶದ ಮೂಲಕ ಮೋದಿ ಮತ್ತು ಶಾಗೆ ಯಡಿಯೂರಪ್ಪ ಸಂದೇಶವನ್ನೂ ಕೊಟ್ಟಿದ್ದಾರೆ ಎಂದು ವಿಶ್ಲೇಷಿಸಲಾಗ್ತಿದೆ. ಆದರೆ ಇದು ಯಡಿಯೂರಪ್ಪ ನಾಯಕತ್ವದ ಗೆಲುವು ಎಂಬುದನ್ನು ಬಿಜೆಪಿಯವರೇ ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳಲು ಸಿದ್ಧರಿಲ್ಲ. ಅದಕ್ಕೆ ಉದಾಹರಣೆ ಮೈಸೂರು-ಕೊಡಗು ಸಂಸದ ಪ್ರತಾಪ್‌ ಸಿಂಹ ಮಾಡಿರುವ ಟ್ವೀಟ್‌.

ಯಡಿಯೂರಪ್ಪನವರಿಗೆ ಕೊಟ್ಟಿರುವ ಶ್ರೇಯಸ್ಸನ್ನು ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಆದರೆ ಅದಕ್ಕೂ ಮೊದಲು ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಕರ್ನಾಟಕದಲ್ಲಿ ೨೫ ಬಿಜೆಪಿ ಸಂಸದರನ್ನು ಗೆಲ್ಲಿಸಿಕೊಂಡು ಬರದೇ ಹೋಗಿದ್ದರೆ ಬೇರೆ ಪಕ್ಷದ ಯಾವ ಶಾಸಕ ಕೂಡಾ ರಾಜೀನಾಮೆ ಕೊಟ್ಟು ಬರುವ ಧೈರ್ಯ ಮಾಡುತ್ತಿರಲಿಲ್ಲ. ಅದನ್ನು ನೆನೆಪಿಟ್ಟುಕೊಳ್ಳಿ. ಅಲ್ಲದೇ ರಾಜೀನಾಮೆ ಕೊಟ್ಟ ಆ ೧೭ ಮಂದಿ ಶಾಸಕರು ತಮ್ಮ-ತಮ್ಮ ಕ್ಷೇತ್ರದಲ್ಲಿ ತಮ್ಮದೇ ವೈಯಕ್ತಿಕ ವರ್ಚಸ್ಸು ಹೊಂದಿದ್ದಾರೆ

ಎಂದು ಹೇಳುವ ಮೂಲಕ ಪರೋಕ್ಷವಾಗಿ ಉಪ ಚುನಾವಣೆಯಲ್ಲಿನ ಗೆಲುವು ಯಡಿಯೂರಪ್ಪ ಗೆಲುವಲ್ಲ ಎಂದ ಸಂದೇಶ ಕೊಟ್ಟಿದ್ದಾರೆ.

ಪ್ರತಾಪ್‌ ಸಿಂಹ ಪ್ರತಿನಿಧಿಸುವ ಮೈಸೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಎಚ್‌ ವಿಶ್ವನಾಥ್‌ ಸೋಲು ಅನುಭವಿಸಿದ್ದಾರೆ.

LEAVE A REPLY

Please enter your comment!
Please enter your name here