ಪವರ್ ಟಿವಿ ಪ್ರಸಾರ ಸ್ಥಗಿತಗೊಳಿಸಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್ ಕೆಂಡಾಮಂಡಲವಾಗಿದ್ದು, ಕರ್ನಾಟಕ ಹೈಕೋರ್ಟ್ನ ಆದೇಶಕ್ಕೆ ತಡೆಯಾಜ್ಞೆಯನ್ನು ವಿಸ್ತರಿಸಿದೆ.
ಪವರ್ ಟಿವಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ಪೀಠ ಕೇಂದ್ರ ಸರ್ಕಾರ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಖಡಕ್ ಪ್ರಶ್ನೆಗಳನ್ನು ಕೇಳಿದೆ.
ಪರವಾನಿಗೆಗಾಗಿ ಅರ್ಜಿ ಸಲ್ಲಿಸಿರುವ ಎಷ್ಟು ಚಾನೆಲ್ಗಳ ಪ್ರಸಾರವನ್ನು ಸ್ಥಗಿತಗೊಳಿಸಲಾಗಿದೆ..? ನವೀಕರಣ ಬಾಕಿ ಇರುವ ಎಷ್ಟು ಚಾನೆಲ್ಗಳನ್ನು ಮುಚ್ಚಲಾಗಿದೆ..? ಎಂದು ಖಡಕ್ ಪ್ರಶ್ನೆ ಕೇಳಿರುವ ಸುಪ್ರೀಂಕೋರ್ಟ್ 1) ಯಾವ ಚಾನೆಲ್ಗಳೆಲ್ಲ ಪರವಾನಿಗೆ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿವೆ 2) ಅವರ ಅರ್ಜಿಯ ವಿಲೇವಾರಿ ಬಾಕಿ ಇದ್ದಾಗ್ಯೂ ಪ್ರಸಾರಕ್ಕೆ ಅನುಮತಿ ನೀಡಲಾಗಿದ್ಯಾ..?
ಎಂಬ ಬಗ್ಗೆ ವಿವರವಾದ ಮಾಹಿತಿ ಸಲ್ಲಿಸುವಂತೆ ಸೂಚಿಸಿದೆ.
ಪವರ್ ಟಿವಿ ಪ್ರಸಾರ ಸ್ಥಗಿತದ ಹಿಂದೆ ರಾಜಕೀಯ ದ್ವೇಷ ಇದೆ ಎಂದೂ ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ನಾವು ವಾದವನ್ನು ಆಲಿಸಿದಷ್ಟು ಇದು ರಾಜಕೀಯ ದ್ವೇಷದ ಕ್ರಮ ಎನ್ನುವುದು ಸ್ಪಷ್ಟವಾಗುತ್ತಿದೆ, ಹೀಗಾಗಿ ನಾವು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಣೆ ಮಾಡುವುದಕ್ಕೆ ಮುಂದಾಗಿದ್ದೇವೆ. ರಾಜ್ಯದಲ್ಲಿ ನಡೆಯುತ್ತಿರುವ ಲೈಂಗಿಕ ಹಗರಣವನ್ನು ಅರ್ಜಿದಾರರು (ಪವರ್ ಟಿವಿ) ಪ್ರಸಾರ ಮಾಡುವುದಕ್ಕೆ ತೀರ್ಮಾನಿಸಿದ್ದಾರೆ. ಚಾನೆಲ್ ನಿಷೇಧದ ಮೂಲಕ ಅರ್ಜಿದಾರರ ಧ್ವನಿಯನ್ನು ಅಡಗಿಸಲಾಗಿದೆ. ಈ ನ್ಯಾಯಾಲಯ ಆತನಿಗೆ ಆ ಧ್ವನಿಯನ್ನು ವಾಪಸ್ ಕೊಡುವ ಜವಾಬ್ದಾರಿ ಹೊತ್ತಿದೆ. ಇದು ಕೇವಲ ರಾಜಕೀಯ ದ್ವೇಷ ಅಷ್ಟೇ, ಬೇರೇನೂ ಅಲ್ಲ, ಒಂದು ವೇಳೆ ನಾವು ಹಕ್ಕುಗಳ ರಕ್ಷಣೆಗೆ ವಿಫಲವಾದ್ರೆ ಈ ನ್ಯಾಯಾಲಯ ತನ್ನ ಕರ್ತವ್ಯದಲ್ಲಿ ವಿಫಲವಾದಂತೆ
ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರಿದ್ದ ಪೀಠ ಕಟು ಅಭಿಪ್ರಾಯ ವ್ಯಕ್ತಪಡಿಸಿದೆ.
ಜೆಡಿಎಸ್ ಮುಖಂಡ ಹೆಚ್ ಎಂ ರಮೇಶ್ಗೌಡ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ್ದ ಕರ್ನಾಟಕ ಹೈಕೋರ್ಟ್ನ ಏಕಸದಸ್ಯ ಪೀಠದ ನ್ಯಾಯಮೂರ್ತಿ ಎಸ್ ಆರ್ ಕೃಷ್ಣಕುಮಾರ್ ಪವರ್ ಟಿವಿ ಪ್ರಸಾರ ಸ್ಥಗಿತಕ್ಕೆ ಆದೇಶಿಸಿದ್ದರು.
ಏಕಸದಸ್ಯ ಪೀಠದ ವಿರುದ್ಧ ಪವರ್ ಟಿವಿ ಕರ್ನಾಟಕ ಹೈಕೋರ್ಟ್ನ ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸಿತ್ತು. ಆದರೆ ನ್ಯಾಯಮೂರ್ತಿ ಕೆ ವಿ ಅಂಜರಿಯ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರಿದ್ದ ಪೀಠ ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡುವುದಕ್ಕೆ ನಿರಾಕರಿಸಿತ್ತು.
ADVERTISEMENT
ADVERTISEMENT