ವಿಧಾನಸಭಾ ಫಲಿತಾಂಶಕ್ಕೂ ಮೊದಲೇ ವಿದ್ಯುತ್​ ದರ ಹೆಚ್ಚಳಕ್ಕೆ ಆದೇಶ ಆಗಿತ್ತು – ಇಂಧನ ಇಲಾಖೆ ಸ್ಪಷ್ಟನೆ

ಜೂನ್​ನಿಂದ ಏರಿಕೆ ಆಗಿರುವ ವಿದ್ಯುತ್​ ದರ ಸಂಬಂಧ ಇಂಧನ ಇಲಾಖೆ ಸಾರ್ವಜನಿಕರಿಗೆ ಸ್ಪಷ್ಟೀಕರಣ ಬಿಡುಗಡೆ ಮಾಡಿದೆ.

ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗುವ ಮೊದಲೇ ಮತ್ತು ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವ ಮೊದಲೇ ಏಪ್ರಿಲ್​ ತಿಂಗಳಿನಿಂದಲೇ ಪೂರ್ವಾನ್ವಯವಾಗುವಂತೆ ದರ ಪರಿಷ್ಕರಣೆಗೆ ಮೇ 12ರಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಆದೇಶ ನೀಡಿರುವುದರಿಂದ ಜೂನ್​ ತಿಂಗಳಲ್ಲಿ ಎರಡು ತಿಂಗಳ (ಏಪ್ರಿಲ್​ ಮತ್ತು ಮೇ) ದರ ಹೆಚ್ಚಳದ ಸೇರಿದ್ದರಿಂದ ಜೂನ್​ ತಿಂಗಳ ಬಿಲ್​ನಲ್ಲಿ ಹೆಚ್ಚು ಮೊತ್ತ ಬಂದಿದೆ ಎಂದು ಇಂಧನ ಇಲಾಖೆ ಸ್ಪಷ್ಟಪಡಿಸಿದೆ.

ಭಾರತೀಯ ವಿದ್ಯುಚ್ಛಕ್ತಿ ಕಾಯ್ದೆಯ ಅನ್ವಯ ವಿದ್ಯುತ್​ ಸರಬರಾಜು ಕಂಪನಿಗಳಿಗೆ ದರವನ್ನು ನಿಗದಿಪಡಿಸಲು ಎಲ್ಲ ರಾಜ್ಯಗಳೂ ವಿದ್ಯುತ್​ ನಿಯಂತ್ರಣ ಆಯೋಗ ಸ್ಥಾಪನೆ ಮಾಡಬೇಕು.

ಹಾಗಾಗಿ ರಾಜ್ಯದ ಎಲ್ಲ 5 ವಿದ್ಯುತ್​ ಸರಬರಾಜು ಕಂಪನಿಗಳಿಗೆ ವಿದ್ಯುತ್​ ದರ ನಿಗದಿಪಡಿಸಲು 2002ರಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ಆಯೋಗವನ್ನು ರಚಿಸಲಾಯಿತು.

ಎಲ್ಲ ಎಸ್ಕಾಂಗಳು ತಮ್ಮ ವೆಚ್ಚದ ಮೇಲಿನ ನಿರೀಕ್ಷಿತ ಆದಾಯದ ವಿವರಗಳನ್ನು ಪ್ರತಿ ವರ್ಷ ನವೆಂಬರ್​ನಲ್ಲಿ ಆಯೋಗಕ್ಕೆ ಸಲ್ಲಿಸಬೇಕು.

ಇದನ್ನು ಪರಿಶೀಲಿಸಿ ಎಲ್ಲ ಎಸ್ಕಾಂಗಳು ಮತ್ತು ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ ಆಯೋಗವು ಆರ್ಥಿಕ ವರ್ಷದ ಮಾರ್ಚ್​ ಅಂತ್ಯದಲ್ಲಿ ವಿದ್ಯುತ್​ ದರವನ್ನು ಏಪ್ರಿಲ್​ 1ರಿಂದ ಅನ್ವಯವಾಗುವಂತೆ ದರವನ್ನು ನಿಗದಿಪಡಿಸುತ್ತದೆ.

ಕರ್ನಾಟಕ ವಿಧಾನಸಭಾ ಚುನಾವಣೆ ಘೋಷಣೆ ಹಾಗೂ ಚುನಾವಣೆಗೆ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಈ ವರ್ಷದ ವಿದ್ಯುತ್​ ದರ ಪರಿಷ್ಕರಣೆ ಅಧಿಸೂಚನೆಯನ್ನು ಆಯೋಗವು ಮೇ 12ರಂದು ಹೊರಡಿಸಿತು.

ರಾಜ್ಯದಲ್ಲಿ ಹೊಸ ಸರ್ಕಾರ ರಚನೆ ಆಗಿದ್ದು ಮೇ 20ರಂದು.  ಅಂದರೆ ವಿದ್ಯುತ್​ ದರ ಪರಿಷ್ಕರಣೆ ಅಧಿಸೂಚನೆಯನ್ನು ನೂತನ ಸರ್ಕಾರ ಅಸ್ತಿತ್ವಕ್ಕೆ ಬರುವ ಮುನ್ನವೇ ಘೋಷಿಸಲಾಯಿತು.

ವಿದ್ಯುತ್​ ದರ ಪರಿಷ್ಕರಣೆಯು ಜೂನ್​ ಬಿಲ್ಲಿಂಗ್​ನಿಂದ ಅನ್ವಯವಾಗುವಂತೆ ಜಾರಿಗೆ ಬಂದಿದ್ದು ಈ ಎರಡು ಕಾರಣಗಳಿಂದಾಗಿ ಜೂನ್​ ತಿಂಗಳ ವಿದ್ಯುತ್​ ಬಿಲ್​ನಲ್ಲಿ ವಿದ್ಯುತ್​ ಶುಲ್ಕ ಹೆಚ್ಚಾಗಿದೆ.

1) ಎರಡು ತಿಂಗಳ ವಿದ್ಯುತ್​ ದರ ಹೆಚ್ಚಳದ ಪರಿಣಾಮ (ಏಪ್ರಿಲ್​ ತಿಂಗಳಿಂದ ಪೂರ್ವಾನ್ವಯವಾಗುವಂತೆ ದರ ಪರಿಷ್ಕರಣೆಗೆ ಮೇ 12ರಂದು ಆಯೋಗ ಆದೇಶ ನೀಡಿದ್ದರ ಹಿನ್ನೆಲೆಯಲ್ಲಿ ಏಪ್ರಿಲ್​ ಮತ್ತು ಮೇ ತಿಂಗಳ ದರ ಹೆಚ್ಚಳ ಜೂನ್​ ತಿಂಗಳ ಬಿಲ್​ನಲ್ಲಿ ಒಟ್ಟಿಗೆ ಬಂದಿದೆ)

2) ಮಾರ್ಚ್​ ತಿಂಗಳಲ್ಲಿ ಹೆಚ್ಚಿನ ವಿದ್ಯುತ್​ ಖರೀದಿ ವೆಚ್ಚ ಪಾವತಿಯ ಪರಿಣಾಮ 

ಮುಂದಿನ ತಿಂಗಳಲ್ಲಿ ಬರುವ ವಿದ್ಯುತ್​ ಬಿಲ್​ ಕಡಿಮೆಯಾಗಬಹುದು ಎಂಬ ನಿರೀಕ್ಷೆ ಹೊಂದಲಾಗಿದೆ

ಎಂದು ಇಂಧನ ಇಲಾಖೆ ವಿವರವಾದ ಸ್ಪಷ್ಟನೆಯನ್ನು ನೀಡಿದೆ.