ವಿದ್ಯುತ್​ ದರ ಹೆಚ್ಚಳದ ಅಸಲಿಯತ್ತು – BJP ಅವಧಿಯಲ್ಲೇ ಹೆಚ್ಚಳ – ಈಗ BJPಯಿಂದಲೇ ಪ್ರತಿಭಟನೆ..!

ಅಕ್ಷಯ್​ ಕುಮಾರ್, ಮುಖ್ಯ ಸಂಪಾದಕರು, ಪ್ರತಿಕ್ಷಣ
ವಿದ್ಯುತ್​ ಬೆಲೆ ಏರಿಕೆ ಈಗ ಕರ್ನಾಟಕದಲ್ಲಿ ಆಡಳಿತ ಪಕ್ಷ ಕಾಂಗ್ರೆಸ್​ ಮತ್ತು ವಿರೋಧ ಪಕ್ಷ ಭಾರತೀಯ ಜನತಾ ಪಕ್ಷದ ಜೊತೆಗೆ ಸಂಘರ್ಷಕ್ಕೆ ಕಾರಣವಾಗಿದೆ.
ಚುನಾವಣಾ ಫಲಿತಾಂಶ ಬಂದು ಇನ್ನೂ ಒಂದು ತಿಂಗಳಾಗಿಲ್ಲ. ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್​ ಸರ್ಕಾರ ಅಧಿಕಾರ ಸ್ವೀಕರಿಸಿಯೂ ಇನ್ನೂ ಒಂದು ತಿಂಗಳಾಗಿಲ್ಲ.
ಜೂನ್​ 1ರಿಂದ ವಿದ್ಯುತ್​ ದರ ಹೆಚ್ಚಳ ಖಂಡಿಸಿ ಬಿಜೆಪಿ ರಾಜ್ಯದ ಎಲ್ಲೆಡೆ ಪ್ರತಿಭಟನೆ ಕೈಗೊಂಡಿದೆ.
ಹಾಗಾದರೆ ಜೂನ್​ 1ರಿಂದ ಜಾರಿಯಾಗಿರುವ ವಿದ್ಯುತ್​ ದರ ಹೆಚ್ಚಳ ಯಾರ ಕೂಸು..? ಇದರ ಹಿಂದಿನ ರೂವಾರಿಗಳು ಯಾರು..?
ಕಳೆದ ವರ್ಷವೇ ಮೂರು ಬಾರಿ ಹೆಚ್ಚಳ:
2022ರ ಏಪ್ರಿಲ್​ನಿಂದ ಮೇ ಅಂತ್ಯದವರೆಗೆ ಅನ್ವಯವಾಗುವಂತೆ ಕರ್ನಾಟಕದಲ್ಲಿ ವಿದ್ಯುತ್​ ದರ ಪ್ರತಿ ಯುನಿಟ್​ಗೆ ಸರಾಸರಿ 35 ಪೈಸೆಯಷ್ಟು ಹೆಚ್ಚಳವಾಗಿತ್ತು.
ಅದೇ ವರ್ಷ ಜೂನ್ 1ರಿಂದ ​ನಿಂದ ಸೆಪ್ಟೆಂಬರ್​ 30ರವರೆಗೆ ಅನ್ವಯವಾಗುವಂತೆ 2ನೇ ಬಾರಿಗೆ ಪ್ರತಿ ಯುನಿಟ್​ಗೆ ಸರಾಸರಿ 25ರಿಂದ 30 ಪೈಸೆ ಹೆಚ್ಚಳ ಮಾಡಲಾಗಿತ್ತು. 
ಇದಾದ ಬಳಿಕ ಕಳೆದ ವರ್ಷವೇ ಅಕ್ಟೋಬರ್​ 1ರಿಂದ ಈ ವರ್ಷದ ಅಂದರೆ 2023ರ ಮಾರ್ಚ್​ 31ರವರೆಗೆ ಅನ್ವಯವಾಗುವಂತೆ ವಿದ್ಯುತ್​ ದರವನ್ನು ಪ್ರತಿ ಯುನಿಟ್​ಗೆ 24 ಪೈಸೆಯಿಂದ 43 ಪೈಸೆಯಷ್ಟು ಹೆಚ್ಚಳ ಮಾಡಲಾಗಿತ್ತು.
ಈ ಜೂನ್​ ತಿಂಗಳಿಂದ ವಿದ್ಯುತ್​ ದರ ಹೆಚ್ಚಳದ ರಹಸ್ಯ:
ವಿದ್ಯುತ್​ ದರ ಏರಿಕೆಯನ್ನು ಖಂಡಿಸಿ ಬಿಜೆಪಿ ಈಗ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದೆ. ಆದರೆ ಈ ವಿದ್ಯುತ್​ ದರ ಹೆಚ್ಚಳವನ್ನು ಖಂಡಿಸಿ ಬಿಜೆಪಿ ಪ್ರತಿಭಟನೆ ಮಾಡುತ್ತಿರುವುದೇ ಸೋಜಿಗ ಎನಿಸುತ್ತಿದೆ.
ಮಾರ್ಚ್​ 13ರಂದು ಆದೇಶ:
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಇದೇ ವರ್ಷದ ಮಾರ್ಚ್​ 13ರಂದು ರಾಜ್ಯದ ಎಲ್ಲ ವಿದ್ಯುತ್​ ಸರಬರಾಜು ಕಂಪನಿಗಳಿಗೆ ಎಫ್​ಎಫ್​ಪಿಸಿಎ (ಇಂಧನ ಮತ್ತು ವಿದ್ಯುತ್​ ಖರೀದಿ ದರ ಹೊಂದಾಣಿಕೆ) ಅಡಿಯಲ್ಲಿ ವಿದ್ಯುತ್​ ದರ ಹೆಚ್ಚಳ ಮಾಡಿ ಆದೇಶ ಹೊರಡಿಸುತ್ತದೆ.
ಆ ಆದೇಶದಂತೆ ಏಪ್ರಿಲ್​ 1ರಿಂದ ಜೂನ್​ 30ರವರೆಗೆ ಮೂರು ತಿಂಗಳ ಅವಧಿಗೆ ಆಯೋಗ ವಿದ್ಯುತ್​ ದರ ಹೆಚ್ಚಳ ಮಾಡಿತ್ತು.
ಬೆಸ್ಕಾಂ: ಯುನಿಟ್​ಗೆ 1 ರೂಪಾಯಿ 1 ಪೈಸೆ
ಮೆಸ್ಕಾಂ: ಯುನಿಟ್​ಗೆ 93 ಪೈಸೆ
ಚೆಸ್ಕಾಂ: ಯುನಿಟ್​ಗೆ 82 ಪೈಸೆ
ಹೆಸ್ಕಾಂ: ಯುನಿಟ್​ಗೆ 1 ರೂಪಾಯಿ
ಜೆಸ್ಕಾಂ: ಯುನಿಟ್​​ಗೆ 67 ಪೈಸೆ
ಆರು ತಿಂಗಳವರೆಗೆ ವಿಸ್ತರಣೆಗೆ ಮನವಿ:
ಈ ಆದೇಶದ ಬಳಿಕ ಬೆಂಗಳೂರು ಮಹಾನಗರ ವಿದ್ಯುತ್​ ಸರಬರಾಜು ಕಂಪನಿ (ಬೆಸ್ಕಾಂ) ಎಫ್​ಪಿಪಿಸಿಎ ಅಡಿಯಲ್ಲಿ ವಿದ್ಯುತ್​ ದರ ಹೆಚ್ಚಳವನ್ನು ಇದೇ ವರ್ಷದ ಜುಲೈ 1ರಿಂದ ಡಿಸೆಂಬರ್​ 30ರವರೆಗೆ ಅಂದರೆ 1ಆರು ತಿಂಗಳವರೆಗೆ ವಿಸ್ತರಣೆ ಮಾಡುವಂತೆ ಮನವಿ ಮಾಡಿತ್ತು.
ಆರು ತಿಂಗಳ ವಿಸ್ತರಣೆಗೆ ಬೆಸ್ಕಾಂ ಕೊಟ್ಟ ಕಾರಣಗಳು:
1) ಬಿಲ್ಲಿಂಗ್​ ಕಾರಣದಿಂದ ಜನವರಿಯಲ್ಲಿ ವಸೂಲಿ ಮಾಡಬೇಕಿದ್ದ ಎಫ್​ಪಿಪಿಸಿಎ ಮೊತ್ತವನ್ನು ಮಾರ್ಚ್​ ತಿಂಗಳಲ್ಲಿ ವಸೂಲಿ ಮಾಡಲು ಸಾಧ್ಯವಾಗಿಲ್ಲ. ಜೊತೆಗೆ ದರ ಹೆಚ್ಚಳದ ಆಯೋಗದ ಆದೇಶದ ಜಾರಿಗೆ ಸಮಯವಾಕಾಶ ಸಾಕಾಗಲಿಲ್ಲ.
2) ಹೀಗಾಗಿ ಪ್ರತಿ ಯುನಿಟ್​​ಗೆ 1 ರೂಪಾಯಿ 49 ಪೈಸೆಯಷ್ಟು ಎಫ್​ಪಿಪಿಸಿಎ ಮೊತ್ತವನ್ನು ಜೂನ್​ ತಿಂಗಳಲ್ಲಿ ಸಂಗ್ರಹಿಸಲು ಅನುಮತಿ ನೀಡಬೇಕು ಮತ್ತು 1 ರೂಪಾಯಿ 81 ಪೈಸೆಯನ್ನು ಜುಲೈನಲ್ಲಿ ಸಂಗ್ರಹಿಸಲು ಅನುಮತಿ ನೀಡಬೇಕು.
3) ವಿದ್ಯುಚ್ಛಕ್ತಿ ಆಯೋಗ ಮೇ 12ರಂದು ಹೊರಡಿಸಿದ ಆದೇಶದ ಪ್ರಕಾರ ಜೂನ್​ನಿಂದ ಪ್ರತಿ ತಿಂಗಳಿಗೆ ಹೆಚ್ಚಳವಾಗಿರುವ 70 ಪೈಸೆಯನ್ನು ಜೂನ್​ ತಿಂಗಳಲ್ಲೂ ಮತ್ತು ಏಪ್ರಿಲ್​ನಲ್ಲಿ ವಸೂಲಿ ಆಗದೇ ಬಾಕಿ ಉಳಿದಿರುವ 70 ಪೈಸೆಯನ್ನೂ ಜೂನ್​ ತಿಂಗಳಲ್ಲೇ ವಸೂಲಿಗೆ ಅವಕಾಶ ನೀಡಬೇಕು.
4) ಹೀಗಾಗಿ ಜೂನ್​ ತಿಂಗಳಲ್ಲಿ ವಿದ್ಯುತ್​ ದರ ಪ್ರತಿ ಯುನಿಟ್​​ಗೆ 2 ರೂಪಾಯಿ 89 ಪೈಸೆಯಷ್ಟು ಹೆಚ್ಚಳ ಆಗಲಿದೆ.
ಹೊಸ ಆದೇಶ
ಈ ಎಲ್ಲ ಅಂಶಗಳನ್ನು ಅಧರಿಸಿ ಇದೇ ತಿಂಗಳು ಅಂದರೆ ಜೂನ್​ 2ರಂದು ವಿದ್ಯುಚ್ಛಕ್ತಿ ಆಯೋಗ ಮಾರ್ಚ್​ 13ರಂದು ತಾನೇ ಹೊರಡಿಸಿದ್ದ ಆದೇಶವನ್ನು ಮಾರ್ಪಡಿಸಿ ಹೊಸ ಆದೇಶವನ್ನು ನೀಡಿತು.
ಆ ಆದೇಶದ ಪ್ರಕಾರ ಮೂರನೇ ತ್ರೈಮಾಸಿಕ ಬಿಲ್ಲಿಂಗ್​ ಅವಧಿ ಅಂದರೆ ಏಪ್ರಿಲ್​ನಿಂದ ಜೂನ್​ವರೆಗಿನ ಎಫ್​ಪಿಪಿಸಿಎ ಮೊತ್ತವನ್ನು ಜುಲೈ 1ರಿಂದ ಡಿಸೆಂಬರ್​ 30ರವರೆಗಿನ ಬಿಲ್ಲಿಂಗ್​ನಲ್ಲಿ ವಸೂಲಿ ಮಾಡಲು ಎಸ್ಕಾಂಗಳಿಗೆ ಅನುಮತಿ ನೀಡಿತು.
ಬಿಜೆಪಿ ಸರ್ಕಾರದ ಅವಧಿಯಲ್ಲೇ ಹೆಚ್ಚಳ:
ಜೂನ್​ 2ರಂದು ವಿದ್ಯುಚ್ಛಕ್ತಿ ಆಯೋಗದ ಆದೇಶವನ್ನು ಗಮನಿಸಿದರೆ ಮಾರ್ಚ್​​ 13ರಂದೇ (ಆಗ ಸಿಎಂ ಬೊಮ್ಮಾಯಿ ಸರ್ಕಾರ ಅಸ್ತಿತ್ವದಲ್ಲಿತ್ತು, ಚುನಾವಣೆ ಘೋಷಣೆ ಆಗಿರಲಿಲ್ಲ) ಏಪ್ರಿಲ್​ನಿಂದ ಜೂನ್​ ಅಂತ್ಯದವರೆಗೆ ಅನ್ವಯವಾಗುವಂತೆ ದರ ಹೆಚ್ಚಳ ಮಾಡಿ ಆದೇಶ ಹೊರಡಿಸಿತ್ತು. 
ಆದರೆ ಎಸ್ಕಾಂಗಳು ಬಿಲ್ಲಿಂಗ್​ ಸಮಸ್ಯೆಯಿಂದ ಎಫ್​ಪಿಪಿಸಿಎ ಮೊತ್ತವನ್ನು ಸಂಗ್ರಹಿಸುವುದನ್ನು ವಿಳಂಬ ಮಾಡಿದವು.
ಫಲಿತಾಂಶದ ಹಿಂದಿನ ದಿನವೇ ಆದೇಶ:
ವಿದ್ಯುತ್​ ದರವನ್ನು ಯುನಿಟ್​ಗೆ 70 ಪೈಸೆಯಂತೆ ಹೆಚ್ಚಳ ಮಾಡಿ ವಿದ್ಯುಚ್ಛಕ್ತಿ ಆಯೋಗ ಹೊಸ ಆದೇಶ ಹೊರಡಿಸಿದ್ದು ಮೇ 12ರಂದು ಅಂದರೆ ವಿಧಾನಸಭಾ ಚುನಾವಣಾ ಫಲಿತಾಂಶದ ಹಿಂದಿನ ದಿನ. ಅಂದರೆ ಇದರಲ್ಲಿ ಈಗಿರುವ ಕಾಂಗ್ರೆಸ್​ ಸರ್ಕಾರದ ಪಾಲಿಲ್ಲ ಎನ್ನುವುದು ಸ್ಪಷ್ಟ.
ಒಟ್ಟು ನಾಲ್ಕು ಬಾರಿ ಹೆಚ್ಚಳ:
ಕಳೆದ ಆರ್ಥಿಕ ವರ್ಷದಲ್ಲಾಗಿರುವ ವಿದ್ಯುತ್​ ದರ ಹೆಚ್ಚಳ ಮತ್ತು ಈ ವರ್ಷದ ಏಪ್ರಿಲ್​ನಿಂದ ಆಗಿರುವ ದರ ಹೆಚ್ಚಳದೊಂದಿಗೆ 1 ವರ್ಷದ ಅವಧಿಯಲ್ಲೇ ವಿದ್ಯುತ್​ ದರ 4 ಬಾರಿ ಹೆಚ್ಚಳವಾಗಿದೆ.
ದರ ಹೆಚ್ಚಳ ಅನಿವಾರ್ಯ:
ಇದೇ ವರ್ಷದ ಜನವರಿ 22ರಂದು ವಿದ್ಯುತ್​ ದರ ಹೆಚ್ಚಳದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಆಗ ಇಂಧನ ಸಚಿವರಾಗಿದ್ದ ವಿ  ಸುನಿಲ್​ ಕುಮಾರ್​ ಅವರು ವಿದ್ಯುತ್​ ದರ ಹೆಚ್ಚಳವನ್ನು ಸಮರ್ಥಿಸಿಕೊಂಡಿದ್ದರು. ಕಲ್ಲಿದ್ದಲು ಬೆಲೆ ಹೆಚ್ಚಳದಿಂದ ದರ ಹೆಚ್ಚಳ ಅನಿವಾರ್ಯವಾಗಿದೆ ಎಂದಿದ್ದರು.
16 ಸಾವಿರ ಕೋಟಿ ರೂಪಾಯಿ ಬಾಕಿ:
ಇದರ ಜೊತೆಗೆ ಜನವರಿ 22ರಂದು ಸಚಿವರಾಗಿದ್ದ ಸುನಿಲ್​ ಕುಮಾರ್​ ಅವರೇ ಕೊಟ್ಟ ಅಂಕಿಅಂಶದ ಪ್ರಕಾರದ ಸರ್ಕಾರದ ವಿವಿಧ ಇಲಾಖೆಗಳಿಂದ ಎಸ್ಕಾಂಗಳಿಗೆ ಬರೋಬ್ಬರೀ 16 ಸಾವಿರ ಕೋಟಿ ರೂಪಾಯಿ ಬಾಕಿ ಇದೆ ಎಂದು ಮಾಹಿತಿ ನೀಡಿದ್ದರು.
ಸಿದ್ದರಾಮಯ್ಯ ಸರ್ಕಾರದ ಮಾಡಬೇಕಾಗಿರುವುದು:
ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿದ್ಯುತ್​ ದರ ಹೆಚ್ಚಳವಾದಾಗ ಅದನ್ನು ನೇರವಾಗಿ ಖಂಡಿಸಿದವರು ಈಗ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರು.
ವಿದ್ಯುತ್​ ದರ ಹೆಚ್ಚಳದ ಬವಣೆಯಿಂದ ಜನಸಾಮಾನ್ಯನ್ನು ಪಾರು ಮಾಡುವ ಸಲುವಾಗಿ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್​ ನೀಡುವ ಯೋಜನೆ ಜುಲೈ 1ರಿಂದ ಅನುಷ್ಠಾನವಾಗಲಿದೆ.
ಆದರೆ ಕೇವಲ 1 ವರ್ಷದೊಳಗೆ 4 ಬಾರಿ ಆಗಿರುವ ವಿದ್ಯುತ್​ ಬೆಲೆ ಏರಿಕೆ ಉದ್ಯಮಗಳ ಮತ್ತು ರೈತರ ಮೇಲೆ ನೇರ ಪರಿಣಾಮ ಬೀರಲಿದೆ. ಹೀಗಾಗಿ ಉದ್ಯೋಗ ಸೃಷ್ಟಿ ಮತ್ತು ಆರ್ಥಿಕತೆಯ ಬೆನ್ನುಲುಬಾಗಿರುವ ಕೃಷಿ ಮತ್ತು ಕೈಗಾರಿಕಾ ಕ್ಷೇತ್ರಗಳಿಗೆ ವಿದ್ಯುತ್​ ಬೆಲೆ ಹೆಚ್ಚಳದ ಹೊಡೆತದಿಂದ ಪಾರಾಗುವ ರಕ್ಷಣೆ ನೀಡುವುದು ಸರ್ಕಾರದ ಹೊಣೆಗಾರಿಕೆ.