ಜೂನ್​ನಿಂದ ವಿದ್ಯುತ್​ ಬೆಲೆ ಏರಿಕೆಗೆ ಕಾರಣ ಏನು..? – ಇಲ್ಲಿದೆ BESCOM MD ಕೊಟ್ಟ ವಿವರವಾದ ಮಾಹಿತಿ

ಕರ್ನಾಟಕ ವಿದ್ಯತ್ಚಕ್ತಿ ನಿಯಂತ್ರಣ ಆಯೋಗ (ಕೆಇಆರ್ ಸಿ) ಕಳೆದ ಮೇ 12 ರಂದು ವಿದ್ಯುತ್ ದರವನ್ನು ಪ್ರತಿ ಯೂನಿಟ್ ಗೆ 70 ಪೈಸೆ ಏರಿಕೆ ಮಾಡಿರುವ ಹಿನ್ನೆಲೆಯಲ್ಲಿ ಬೆಸ್ಕಾಂ, ಜೂನ್ ತಿಂಗಳಲ್ಲಿ ನೀಡುವ ಮೇ ತಿಂಗಳ ವಿದ್ಯುತ್ ಬಳಕೆಯ ಬಿಲ್ ನಲ್ಲಿ ಪರಿಷ್ಕೃತ ವಿದ್ಯುತ್ ಶುಲ್ಕವನ್ನು ನಮೂದಿಸಿದೆ.

ಏಪ್ರಿಲ್​ ತಿಂಗಳ ಬಾಕಿಯೂ ಜೂನ್​ನಿಂದ ವಸೂಲಿ:

ವಿದ್ಯುತ್ ದರ ಪರಿಷ್ಕರಣೆ ಆದೇಶ ಏಪ್ರಿಲ್ ನಿಂದ ಪೂರ್ವನ್ವಯವಾಗುವುದರಿಂದ ಬಿಲ್ ನಲ್ಲಿ ಏಪ್ರಿಲ್ ತಿಂಗಳ ಹಿಂಬಾಕಿಯನ್ನು ನೀಡಲಾಗಿದೆ. ಹಾಗೆಯೇ  ಕೆಇಆರ್ ಸಿ ಆದೇಶದ ಪ್ರಕಾರ ಎರಡು ಶ್ರೇಣಿಗಳಲ್ಲಿ ವಿದ್ಯುತ್ ಶುಲ್ಕವನ್ನು ಸಂಗ್ರಹಿಸಲಾಗುತ್ತಿದೆ.

ಗ್ರಾಹಕರು ಬಳಸುವ ಮೊದಲ 100 ಯೂನಿಟ್‌ ವಿದ್ಯುತ್‌ ಗೆ  ಪ್ರತಿ ಯೂನಿಟ್‌ ದರ  4.75 ರೂ ವಿಧಿಸಲಾಗಿದೆ. 100 ಯೂನಿಟ್ ಮೀರಿದರೆ ಬಳಸಿದ ಅಷ್ಟೂ ಯೂನಿಟ್ ಗೆ ಎರಡನೇ ಶ್ರೇಣಿ ದರ ಪ್ರತಿ ಯೂನಿಟ್‌ ಗೆ 7 ರೂ. ಅನ್ವಯವಾಗಲಿದೆ.

ಈ ಮೊದಲು ಮೂರು ಶ್ರೇಣಿ ದರಗಳಲ್ಲಿ (Telescopic) ಸಂಗ್ರಹಿಲಾಗುತ್ತಿತ್ತು. (ಮೊದಲ 50 ಯೂನಿಟ್ ಗೆ 4.15 ರೂ., ನಂತರದ 50 ಯೂನಿಟ್ ಗೆ 5.6 ರೂ ಹಾಗೂ 100 ಯೂನಿಟ್ ಮೀರಿದರೆ 7.15 ರೂ. ಸಂಗ್ರಹಿಸಲಾಗುತ್ತಿತ್ತು).

ಮೇ 12ರಂದು ಆಯೋಗ ಆದೇಶ:

ಇದೀಗ ಎರಡು ಶ್ರೇಣಿ ದರಗಳಲ್ಲಿ (Non-Telescopic) ಸಂಗ್ರಹಿಸಲು ಕೆಇಆರ್‌ಸಿ ಮೇ 12 ರಂದು ಹೊರಡಿಸಿರುವ ಆದೇಶದಲ್ಲಿ  ಸ್ಪಷ್ಟಪಡಿಸಲಾಗಿದೆ ಎಂದು ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ನಿಗದಿತ ಶುಲ್ಕ ಪರಿಷ್ಕರಣೆ:

ಕೆಇಆರ್‌ ಸಿ ದರ ಪರಿಷ್ಕರಣೆ ಆದೇಶದಲ್ಲಿ ನಿಗದಿತ ಶುಲ್ಕದಲ್ಲಿ 1 ರಿಂದ 50 ಕಿಲೋ ವ್ಯಾಟ್‌ ವಿದ್ಯುತ್‌ ಮಂಜೂರಾತಿ ಲೋಡ್‌ ಗೆ 110 ರೂ. ಮತ್ತು 50 ಕೆವಿಗೆ ಮೇಲ್ಪಟ್ಟ ವಿದ್ಯುತ್‌ ಮುಂಜೂರಾತಿ ಲೋಡ್‌ ಗೆ 210 ರೂ. ಬರಲಿದೆ. 

ಕೆಆರ್ ಇಸಿ ದರ ಪರಿಷ್ಕರಣೆ ನೀತಿ ಹೇಗೆ : 

ಕೆಇಆರ್ ಸಿ ದರ ನಿಯಂತ್ರಣ ಅಧಿಸೂಚನೆ 2006ರ ಪ್ರಕಾರ ಎಲ್ಲಾ ಎಸ್ಕಾಂಗಳೂ ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ವಿದ್ಯುತ್ ದರ ಪರಿಷ್ಕರಣೆಗೆ ಕೆಇಆರ್ ಸಿ ಮುಂದೆ ಅರ್ಜಿ ಸಲ್ಲಿಸಬೇಕು.

ಅರ್ಜಿಗೆ ಆಕ್ಷೇಪಣೆಗಳನ್ನು ಆಹ್ವಾನಿಸಿ ಎಸ್ಕಾಂಗಳ ಮನವಿಯನ್ನು ಪರಿಗಣಿಸಿ ಕೆಇಆರ್ ಸಿ ಪ್ರತಿ ವರ್ಷ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ದರ ಪರಿಷ್ಕರಣೆ ಆದೇಶವನ್ನು ನೀಡುತ್ತದೆ.

ಇದು ಕೆಇಆರ್ ಸಿ ಯ ಸಾಮಾನ್ಯ ನಡವಳಿಯಾಗಿದ್ದು, ಎಸ್ಕಾಂಗಳು ದರ ಪರಿಷ್ಕಣೆಗೆ ಅರ್ಜಿ ಸಲ್ಲಿಸದಿದ್ದ ಪಕ್ಷದಲ್ಲಿ ಕೆಇಆರ್ ಸಿ ಸ್ವಯಂಪ್ರೇರಿತವಾಗಿ ವಿದ್ಯುತ್ ದರ ಏರಿಕೆ ಆದೇಶ ನೀಡಲು ಕಾನೂನಿನಲ್ಲಿ ಅವಕಾಶವಿದೆ. 

ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ತಡೆ:

ಈ ವರ್ಷದ ಮಾರ್ಚ್ / ಏಪ್ರಿಲ್ ನಲ್ಲಿ ಜಾರಿಗೆ ಬರಬೇಕಿದ್ದ ದರ ಪರಿಷ್ಕರಣೆ ಆದೇಶವನ್ನು ಮಾರ್ಚ್ 29, 2023ರಂದು ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದ ಹಿನ್ನೆಲೆಯಲ್ಲಿ ಕೆಇಆರ್ ಸಿ ತಡೆ ಹಿಡಿದಿತ್ತು.

ಮತದಾನ ಮುಗಿದ ತಕ್ಷಣ ಆದೇಶ:

ಚುನಾವಣೆ ಮುಗಿದ ತಕ್ಷಣ, ಮೇ 12ರಂದು ದರ ಪರಿಷ್ಕರಣೆ ಮಾಡಿ ಏಪ್ರಿಲ್ ನಿಂದ ಪೂರ್ವನ್ವಯವಾಗುವಂತೆ ಜಾರಿಗೊಳಿಸಿ ಕೆಇಆರ್ ಸಿ ಆದೇಶ ನೀಡಿತ್ತು. 

 2022ರ ನವೆಂಬರ್ ನಲ್ಲಿ ವಿದ್ಯುತ್ ದರ ಪರಿಷ್ಕರಣೆಗೆ ನೀಡಿದ್ದ ಮನವಿಯನ್ನು ಪುರಸ್ಕರಿಸಿ ಏಪ್ರಿಲ್ ತಿಂಗಳಿಂದ ಅನ್ವಯವಾಗುವಂತೆ ಪ್ರತಿ ಯೂನಿಟ್ ಗೆ 70 ಪೈಸೆ ಯಷ್ಟು ಹೆಚ್ಚಳ ಮಾಡಿದ ಮೊತ್ತವನ್ನು ಜೂನ್ ತಿಂಗಳಲ್ಲಿ ಸಂಗ್ರಹಿಸಲಾಗುತ್ತಿದೆ ಎಂದು ಬೆಸ್ಕಾಂ ಎಂಡಿ ತಿಳಿಸಿದರು.  

ವಿದ್ಯುತ್ ದರ ಪರಿಷ್ಕರಣೆಯನ್ನು  ನವೆಂಬರ್ 4, 2020 ರಂದು ಪ್ರತಿ ಯೂನಿಟ್ ಗೆ 40 ಪೈಸೆ, ಜೂನ್ 6, 2021ರಂದು ಪ್ರತಿ ಯೂನಿಟ್ ಗೆ 30 ಪೈಸೆ ಹಾಗು ಏಪ್ರಿಲ್ 4, 2022ರಂದು ಪ್ರತಿ ಯೂನಿಟ್ ಗೆ 35 ಪೈಸೆಗಳಷ್ಟು ಹೆಚ್ಚಳ ಮಾಡಿ ಕೆಆರ್ ಇಸಿ ಆದೇಶ ಹೊರಡಿಸಿತ್ತು.

ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚ ಹೊಂದಾಣಿಕೆ ಶುಲ್ಕ (FPPCA):

ಕಾಲಕಾಲಕ್ಕೆ ಕೆಇಆರ್ ಸಿ ಜಾರಿಗೊಳಿಸುವ ವಿದ್ಯುತ್ ದರ ಪರಿಷ್ಕರಣೆಗೂ ಮತ್ತು ಎಸ್ಕಾಂಗಳು ಜನರೇಟರ್ ಗಳಿಂದ ಖರೀದಿಸುವ ವಿದ್ಯುತ್ ಮೇಲಿನ ಇಂಧನ ವೆಚ್ಚದಲ್ಲಿನ ಬೆಲೆಯಲ್ಲಿ  ವ್ಯತ್ಯಾಸ ಉಂಟಾಗುವುದಿರಂದ ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚ ಹೊಂದಾಣಿಕೆ ಶುಲ್ಕವನ್ನು ವಿಧಿಸಲು ಕೆಇಆರ್ ಸಿ ಎಸ್ಕಾಂಗಳಿಗೆ ಅನುಮತಿ ನೀಡುತ್ತದೆ. 

ಕೇಂದ್ರ ಸರಕಾರ 2005ರ ವಿದ್ಯುಚ್ಚಕ್ತಿ ನಿಯಮಗಳಿಗೆ ಡಿಸೆಂಬರ್ 29, 2022ರಲ್ಲಿ ತಿದ್ದುಪಡಿ ತಂದು ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚವನ್ನು ಸಮಯಕ್ಕೆ ಸರಿಯಾಗಿ ಸಂಗ್ರಹಿಸಲು ಸೂಚಿಸಿತ್ತು. 

ಈ ತಿದ್ದುಪಡಿ ಅನ್ವಯ ಇಂಧನ  ಮತ್ತು ವಿದ್ಯುತ್ ಖರೀದಿ ವೆಚ್ಚವನ್ನು ಪ್ರತಿ ತಿಂಗಳು ಗ್ರಾಹಕರಿಂದ ಸಂಗ್ರಹಿಸಲು ಕೆಇಆರ್ ಸಿ ಫೆಬ್ರವರಿ 23, 2023ರಂದು ಅಧಿಸೂಚನೆ ಹೊರಡಿಸಿತ್ತು. 

ಹಾಗಾಗಿ ಇಂಧನ  ಮತ್ತು ವಿದ್ಯುತ್ ಖರೀದಿ ವೆಚ್ಚವನ್ನು ಬೆಸ್ಕಾಂ ಗ್ರಾಹಕರಿಗೆ ಪ್ರತಿ ಯೂನಿಟ್ ಗೆ 59 ಪೈಸೆ ಯಷ್ಟು ವಿಧಿಸಲು ಕೆಇಆರ್ ಸಿ ಅನುಮತಿ ನೀಡಿದ್ದು, ಈ ಮೊತ್ತವನ್ನು ಜೂನ್ ತಿಂಗಳಲ್ಲಿ ಗ್ರಾಹಕರಿಂದ ಸಂಗ್ರಹಿಸಲಾಗುತ್ತಿದೆ ಎಂದು ಬೆಸ್ಕಾಂ ಎಂಡಿ ತಿಳಿಸಿದ್ದಾರೆ.