ಚಾರ್ಮಾಡಿ ಘಾಟ್: ನಿಬಂಧನೆಗಳನ್ವಯ ಮತ್ತೆ ಲಘು ವಾಹನಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್

ಚಾರ್ಮಾಡಿ: ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ -73 (ಹಳ ರಾ.ಹೆ- 234) ಮಂಗಳೂರು – ವಿಲ್ಲುಪುರಂ ರಸ್ತೆಯ ಕಿ.ಮೀ. 76.00 ರಿಂದ ಕಿ.ಮೀ, 86.20ರ ವರೆಗೆ ಚಾರ್ಮಾಡಿ ಘಾಟ್  ಮಾರ್ಗದಲ್ಲಿ ಕಲವು ನಿಬಂಧನೆಗಳನ್ವಯ ದಿನದ 24 ಗಂಟೆಗಳ ಕಾಲ ಲಘು ಹಾಗೂ ಕೆಲವು ಘನ ವಾಹನಗಳ ಸಂಚಾರಕ್ಕೆ ಜಿಲ್ಲಾಡಳಿತ ಹಸಿರು ನಿಶಾನೆ ತೋರಿದೆ.

ಹಾಗೇ ಮೋಟಾರು ವಾಹನ ಕಾಯಿದೆ 1988ರ ಸೆಕ್ಷನ್ 115 ಹಾಗೂ 1989ರ ನಿಯಮ 221(ಎ)(5) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಎಲ್ಲಾ ರೀತಿಯ ಭಾರೀ ವಾಹನಗಳ (ಗುಂಪು-ಬಿ ವಾಹನಗಳು) ಸಂಚಾರವನ್ನು ನಿರ್ಬಂಧಿಸಿದ್ದು, ಈ ನಿಯಮವನ್ನು  ಎ. 9 ರಿಂದ ಜಾರಿಗೆ ಬರುವಂತೆ ಜಿಲ್ಲಾದಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಆದೇಶಿಸಿದ್ದಾರೆ.

ಸಾರ್ವಜನಿಕರು ಸಂಚರಿಸುವ ಕೆಎಸ್​​ಆರ್​ಟಿಸಿ ಬಸ್, ಆರು ಚಕ್ರದ ಲಾರಿ, ನಾಲ್ಕು ಚಕ್ರದ ವಾಹನಗಳು, ಟೆಂಪೋ ಟ್ರಾವೆಲ್ಲರ್ಸ್, ಆ್ಯಂಬುಲೆನ್ಸ್, ಕಾರು, ಜೀಪು, ವ್ಯಾನ್, ಎಲ್‌ಸಿ (ಮಿನಿ ವ್ಯಾನ್) ಹಾಗೂ ದ್ವಿಚಕ್ರ ವಾಹನಗಳು ಸಂಚರಿಸಬಹುದು.

ಕಳೆದ ಭಾರಿ ಸುರಿದ ತೀವ್ರ ಮಳೆಗೆ ಚಾರ್ಮಾಡಿ ಘಾಟ್ ರಸ್ತೆ ಹಾನಿಗೆ ಒಳಗಾಗಿತ್ತು. ಈ ಮಾರ್ಗ ದಕ್ಷಿಣ ಕನ್ನಡ ಜಿಲ್ಲೆ ಹಾಗೂ  ಚಿಕ್ಕಮಗಳೂರು ಜಿಲ್ಲೆಯನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದ್ದು, ರಸ್ತೆಯಲ್ಲಿ ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಿದ್ದರಿಂದ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ.

LEAVE A REPLY

Please enter your comment!
Please enter your name here