ಜನರು ಮಾಸ್ಕ್ ಧರಿಸುತ್ತಿಲ್ಲ. ಕೊರೋನಾ ಹೊರಟು ಹೋಗಿದೆ ಅಂತ ಅಂದುಕೊಂಡಿದ್ದಾರೆ. ಆದರೆ ಜನರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಬೇಕು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದು ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ ಇದೆ. ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ಆರೋಗ್ಯ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಇರುತ್ತಾರೆ. ನಾನು ಕೂಡಾ ಎರಡು ವಾರಗಳಿಂದ ನಮ್ಮ ಇಲಾಖೆ ಅಧಿಕಾರಿಗಳ ಜೊತೆ ಸತತವಾಗಿ ಸಂಪರ್ಕದಲ್ಲಿ ಇದ್ದೇನೆ. 4 ನೇ ಅಲೆ ಹೇಗೆ ರಿಯಾಕ್ಟ್ ಮಾಡುತ್ತದೆ. ಹೊಸ ಪ್ರಭೇದ ಏನಾದರೂ ಇದೆಯಾ ಅಂತ ಇವತ್ತಿನ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಸಭೆಯಲ್ಲಿ ಮುನ್ನೆಚ್ಚರಿಕೆ ಕ್ರಮ, 4ನೇ ಅಲೆ ಎದುರಿಸಲು ಯಾವ ಕ್ರಮ ತೆಗೆದುಕೊಳ್ಳಬೇಕು ಅಂತ ಚರ್ಚಿಸುತ್ತೇವೆ ಎಂದು ತಿಳಿಸಿದ್ದಾರೆ.
ಜನರು ಮಾಸ್ಕ್ ಧರಿಸುತ್ತಿಲ್ಲ. ಕೊರೋನಾ ಹೋಗಿದೆ ಅಂತ ಅಂದುಕೊಂಡಿದ್ದಾರೆ. ಆದರೆ ಜನರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಬೇಕು. ಅನೇಕ ಜನರು ಲಸಿಕೆ ಕೂಡಾ ಪಡೆದಿಲ್ಲ. 2ನೇ ಡೋಸ್ ಪಡೆದಿಲ್ಲದವರು ಎರಡನೇ ಡೋಸ್ ಪಡೆಯಬೇಕು. ಬೂಸ್ಟರ್ ಡೋಸ್ ಕೂಡಾ ಪಡೆಯಬೇಕು. 12 ವರ್ಷ ಮೇಲ್ಪಟ್ಟ ಮಕ್ಕಳಿಗೂ ಪೋಷಕರು ಲಸಿಕೆ ಕೊಡಿಸಬೇಕು. ಆದಷ್ಟು ಬೇಗ 5 ವರ್ಷ ಮೇಲ್ಪಟ್ಟವರಿಗೂ ಲಸಿಕೆ ಬರಲಿದೆ. ಈ ಎಲ್ಲಾ ಅಂಶಗಳನ್ನು ಇವತ್ತಿನ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಕೊರೋನಾ ತಡೆಗಟ್ಟಲು ಯಾವ ಕ್ರಮಕೈಗೊಳ್ಳಬೇಕು ಮತ್ತು ನಿಯಮಗಳ ಬಗ್ಗೆ ತಜ್ಞರ ಸಲಹೆ ಪಡೆಯುತ್ತೇವೆ ಎಂದಿದ್ದಾರೆ.
ಕೊರೊನಾ 4ನೇ ಅಲೆ ಭೀತಿ ಹಿನ್ನಲೆ ಏರ್ ಪೋರ್ಟ್ಗಳಲ್ಲಿ ಕಠಿಣ ನಿಯಮಗಳನ್ನು ಈಗಾಗಲೇ ಜಾರಿಗೊಳಿಸಲಾಗಿದೆ. ಸೋಂಕು ಹೆಚ್ಚು ಇರುವ 8 ದೇಶಗಳಿಂದ ಬರುವ ಪ್ರಯಾಣಿಕರಿಗೆ ನಿಯಮ ಜಾರಿ ಮಾಡಲಾಗಿದೆ. ಏರ್ ಪೋರ್ಟ್ ನಲ್ಲಿ ಈ ಹಿಂದೆ ಇದ್ದ ಮಾರ್ಗಸೂಚಿಗಳೇ ಮುಂದುವರಿಕೆ ಆಗುತ್ತವೆ. ದೆಹಲಿ ಸೇರಿದಂತೆ ಕೆಲ ರಾಜ್ಯದಲ್ಲಿ ಸೋಂಕು ಹೆಚ್ಚಳವಾಗಿದೆ. ನಾವು ದೆಹಲಿಗಿಂತ 2-3 ವಾರ ಹಿಂದೆ ಇದ್ದೇವೆ. 2-3 ವಾರ ಆದ ಮೇಲೆ ನಮ್ಮಲ್ಲಿ ಹೇಗೆ ಸೋಂಕು ಹೆಚ್ಚಳವಾಗುತ್ತದೆ ಎಂಬ ಬಗ್ಗೆ ಗೊತ್ತಾಗಲಿದೆ ಎಂದಿದ್ದಾರೆ.
ರಾಜ್ಯದಲ್ಲಿ ಔಷಧಿ ಕೊರತೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಔಷಧಿ ಕೊರತೆ ಇಲ್ಲ. ಈಗಾಗಲೇ DHO,THOಗಳ ಅಕೌಂಟ್ಗೆ ಹಣ ಹಾಕಿದ್ದೇವೆ. ಸ್ಥಳೀಯವಾಗಿ ಅವಶ್ಯಕವಾದ ಔಷಧಿಗಳನ್ನು ಖರೀದಿಗೆ ಅನುಮತಿ ಕೊಟ್ಟಿದ್ದೇವೆ. ಅವರು ಔಷಧಿ ಖರೀದಿ ಮಾಡಬಹುದು ಎಂದು ತಿಳಿಸಿದ್ದಾರೆ.