ಆರ್ಥಿಕ ಮಹಾ ಸಂಕಷ್ಟದ ಅಂಚಿನಲ್ಲಿರುವ ಪಾಕಿಸ್ತಾನವನ್ನು ಈ ಬಿಕ್ಕಟ್ಟಿನಿಂದ ಪಾರು ಮಾಡಲು ಆ ದೇಶದ ಮೇಧಾವಿಗಳ ವರ್ಗ ಎಲ್ಲಾ ಮಾರ್ಗಗಳನ್ನು ಅನ್ವೇಷಿಸುತ್ತಿದೆ. ಈಗಾಗಲೇ ಆಮದು ಖರ್ಚನ್ನು ಕಡಿಮೆ ಮಾಡಿಕೊಳ್ಳಲು ದಿನಕ್ಕೆ ಒಂದು ಅಥವಾ 2ಕಪ್ ಟೀ ಮಾತ್ರ ಕುಡಿಯಬೇಕೆಂದು ಖುದ್ದು ಪಾಕ್ ಸಚಿವರೇ ಸೂಚನೆ ನೀಡಿದ್ದರು.
ಇದೀಗ ಇನ್ನೂ, ಒಂದು ಹೆಜ್ಜೆ ಮುಂದೆ ಹೋಗಿರುವ ಉನ್ನತ ಶಿಕ್ಷಣ ಇಲಾಖೆ, ಟೀ ಕುಡಿಯಬೇಡಿ.. ಅದರ ಬದಲು ಲಸ್ಸಿ ಕುಡಿಯಬೇಡಿ. ಸತ್ತುವಿನಂತಹ ಸ್ಥಳೀಯ ಪಾನಿಯಗಳನ್ನು ಸೇವನೆ ಮಾಡಿ ಎಂದು ಸಲಹೆ ನೀಡಿದೆ. ಉನ್ನತ ಶಿಕ್ಷಣ ಸಮಿತಿಯ ಡಾ.ಸೊಹೈಲ್ ಪಾಕ್ ವಿಶ್ವವಿದ್ಯಾಲಯಗಳ ಉಪ ಕುಲಪತಿಗಳಿಗೆ ಪತ್ರ ಬರೆದಿದ್ದಾರೆ.
ಬಡತನ ರೇಖೆಗಿಂತ ಕೆಳಗಿರುವವರನ್ನು ಆರ್ಥಿಕ ಕಷ್ಟಗಳಿಂದ ಪಾರು ಮಾಡಲು ಹೊಸ ಮಾರ್ಗಗಳನ್ನು ಸೂಚಿಸುವಂತೆ ಕೋರಿದ್ದಾರೆ. ಅದರ ಭಾಗವಾಗಿ ಸ್ಥಳೀಯವಾಗಿ ಟೀ ಸೊಪ್ಪು ಬೆಳೆಯಲು ಪ್ರೋತ್ಸಾಹ ನೀಡಬೇಕೆಂದು ಸೂಚಿಸಿದ್ದಾರೆ. ಹಾಗೆಯೇ, ಲಸ್ಸಿ, ಸತ್ತುವಿನಂತಹ ಸ್ಥಳೀಯ ಮತ್ತು ಸಾಂಪ್ರದಾಯಕ ಪಾನಿಯಗಳನ್ನು ಸೇವಿಸುವಂತೆ ಜಾಗೃತಿ ಮೂಡಿಸಬೇಕು. ಇವುಗಳ ಜಾರಿಗೆ ಅಗತ್ಯವಿರುವ ವಿನೂತನ ಪದ್ದತಿಗಳನ್ನು ಅನ್ವೇಷಿಸುವಂತೆ ಕೋರಿದ್ದಾರೆ. ಇದರಿಂದ ಉದ್ಯೋಗ ಹೆಚ್ಚಲಿದೆ. ಜೊತೆಗೆ ಟೀ ಆಮದು ಬಿಲ್ ಕೂಡ ಕಡಿಮೆ ಆಗಲಿದೆ ಎಂದಿದ್ದಾರೆ.
ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನದ ಲೆಕ್ಕದ ಪ್ರಕಾರ ಜೂನ್ 17ರ ಹೊತ್ತಿಗೆ ಪಾಕಿಸ್ತಾನದ ಬಳಿ 8.2 ಬಿಲಿಯನ್ ಡಾಲರ್ನಷ್ಟು ವಿದೇಶಿ ವಿನಿಮಯ ಮೊತ್ತವಷ್ಟೇ ಇದೆ.
2021-22ರಲ್ಲಿ ಪಾಕಿಸ್ತಾನ 400ಮಿಲಿಯನ್ ಡಾಲರ್ ಮೌಲ್ಯದ ಟೀ ಪುಡಿಯನ್ನು ಆಮದು ಮಾಡಿಕೊಂಡಿದೆ. ಅದು ಈ ವರ್ಷ 460 ಮಿಲಿಯನ್ ಡಾಲರ್ಗೆ ಹೆಚ್ಚಾಗಿದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ಅಮದು ಖರ್ಚು ಕಡಿಮೆ ಮಾಡಿಕೊಳ್ಳಲು ಪಾಕ್ ಸರ್ಕಾರ ಪ್ರಯತ್ನ ಮಾಡುತ್ತಿದೆ.