ಇಂದು ಮಹಾರಾಷ್ಟ್ರದಲ್ಲಿ ನಡೆಯುತ್ತಿದೆ. ಮುಂದೆ ಬೇರೆ ಬೇರೆ ರಾಜ್ಯಗಳಲ್ಲಿ ನಡೆಯಲಿದೆ ಎಂದು ಹೇಳುವ ಮೂಲಕ ಮುಂದಿನ ದಿನಗಳಲ್ಲಿ ದೇಶಾದ್ಯಂತ ಅಪರೇಷನ್ ಕಮಲ ನಡೆಸಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ನಾಯಕ, ಪಶ್ಚಿಮ ಬಂಗಾಳ ವಿರೋಧ ಪಕ್ಷದ ನಾಯಕ ಸುವೆಂದು ಅಧಿಕಾರಿ ಬಹಿರಂಗ ಸಮಾವೇಶದಲ್ಲಿ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಕೊಚ್ ಬಿಹಾರ್ ನಗರದಲ್ಲಿ ಇಂದು ಬುಧವಾರ ಸಮಾವೇಶದಲ್ಲಿ ಅವರು ಮಾತನಾಡಿದ್ದಾರೆ. ಇದೀಗ ಮಹಾರಾಷ್ಟ್ರದಲ್ಲಿ ಏನಾಗುತ್ತಿದೆಯೋ, ಮುಂದೆ ಜಾರ್ಖಾಂಡ್ ನಂತರ ರಾಜಸ್ಥಾನ್ ಅನಂತರ ಪಶ್ಚಿಮ ಬಂಗಾಳದಲ್ಲಿ ನಡೆಯಲಿದೆ. ಅದೇ ಅದೃಷ್ಟ ನಮಗಾಗಿ ಕಾಯುತ್ತಿದೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ರಾಜಕಾರಣದಲ್ಲಿ ಬಿಕ್ಕಟ್ಟು ಏರ್ಪಟ್ಟಿದೆ. ಆಡಳಿತಾರೂಡ ಸರ್ಕಾರ ಶಿವಸೇನಾ ಪಕ್ಷದ 40 ಜನ ಶಾಸಕರು ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದಿಂದ ಶಿವಸೇನಾ ಪಕ್ಷವನ್ನು ಹೊರಬರುವಂತೆ ಒತ್ತಾಯಿಸುತ್ತಿದ್ದಾರೆ.
ಈಗಾಗಲೇ ಮಹಾರಾಷ್ಟ್ರದ ರಾಜ್ಯಪಾಲ ಕೋಶ್ಯಾರಿಯವರು ಗುರುವಾರ ಸಾಯಂಕಾಲ 5:30ರ ಒಳಗಾಗಿ ಬಹುಮತ ಸಾಬೀತು ಪಡಿಸುವಂತೆ ಮುಖ್ಯಮಂತ್ರಿ ಉದ್ದವ್ ಠಾಕ್ರೆಯವರಿಗೆ ಸೂಚಿಸಿದ್ದಾರೆ. ಮಹಾರಷ್ಟ್ರ ತೊರೆದು ಬಿಜೆಪಿ ಆಡಳಿತವಿರುವ ಪ್ರವಾಹ ಪೀಡಿತ ಅಸ್ಸಾಂನಲ್ಲಿ ಏಕನಾಥ್ ಶಿಂಧೆ ನೇತೃತ್ವದಲ್ಲಿ ಭಿನ್ನಮತೀಯ ಶಾಸಕರು ಇದುವರೆಗೂ ಉಳಿದುಕೊಂಡಿದ್ದರು.
ನಾಳೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಾಳೆ ನಡೆಯಲಿರುವ ಬಹುಮತ ಯಾಚನೆಯಲ್ಲಿ ಸರ್ಕಾರದ ವಿರುದ್ಧವಾಗಿ 50 ಜನ ಶಾಸಕರು ಮತ ಚಲಾವಣೆ ಮಾಡಲಿದ್ದೇವೆ ಎಂದು ಏಕನಾಥ್ ಶಿಂಧೆ ಹೇಳಿದ್ದಾರೆ.
ರಾಜ್ಯಪಾಲರ ಈ ನಿರ್ಧಾರದ ವಿರುದ್ಧ ಸಿಎಂ ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ಇಂದು ಸಾಯಂಕಾಲ ವಿಚಾರಣೆ ನಡೆಯಲಿದೆ.