ಒನಕೆ ಓಬವ್ವ ಜಯಂತಿ ಘೋಷಣೆ – ಕಾಂಗ್ರೆಸ್ ಗೆ ಬಿಜೆಪಿ ಸರ್ಕಾರದ ಗುದ್ದು

ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಒನಕೆ ಓಬವ್ವಳ ಜಯಂತಿ ಘೋಷಿಸಿದೆ. ಈ ವರ್ಷದಿಂದ ಪ್ರತಿ ವರ್ಷ ನವೆಂಬರ್ 11ರಂದು ಒನಕೆ ಓಬವ್ವಳ ಜಯಂತಿ ಆಚರಿಸಲಾಗುತ್ತದೆ.

ಈ ಮೂಲಕ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಟಿಪ್ಪು ಸುಲ್ತಾನ್ ಜಯಂತಿ ಆಚರಿಸಿದ್ದ ಕಾಂಗ್ರೆಸ್‌ಗೆ ಬಿಜೆಪಿ ರಾಜಕೀಯ ಸೆಡ್ಡು ಹೊಡೆದಿದೆ.

`ಒನಕೆ ಓಬವ್ವರ ಹೆಸರು ಚಿತ್ರದುರ್ಗ ಇತಿಹಾಸದಲ್ಲಿ ಮರೆಯಲಾಗದ್ದು. ಅವರನ್ನು ಕರ್ನಾಟಕ ವೀರ ವನಿತೆಯರಾದ ಕಿತ್ತೂರು ಚೆನ್ನಮ್ಮ, ರಾಣಿ ಅಬ್ಬಕ್ಕರ ಸಾಲಿನಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಒನಕೆ ಓಬವ್ವ 18ನೇ ಶತಮಾನದ ಚಿತ್ರದುರ್ಗದ ಕೋಟೆ ಪಾಳೆಯಗಾರನಾಗಿದ್ದ ಮದಕರಿ ನಾಯಕನ ಕಾವಲುಗಾರ ಕಹಳೆ ಮುದ್ದುಹನುಮಪ್ಪನ ಹೆಂಡತಿ.

ಚಿತ್ರದುರ್ಗದ ಮೇಲೆ ಹೈದರಾಲಿಯ ಸೈನಿಕರು ಹಠತ್ತಾಗಿ ಆಕ್ರಮಣ ಮಾಡಿದಾಗ ಓಬವ್ವ ತನ್ನ ಒನಕೆಯನ್ನು ಅಸ್ತ್ರವಾಗಿ ಇಟ್ಟುಕೊಂಡು ಶತ್ರುಗಳನ್ನು ಎದುರಿಸಿದ್ದಳು. ಚಿತ್ರದುರ್ಗ ಕೋಟೆಯ ಕಿಂಡಿಯಿಂದ ಬಂದ ನೂರಾರು ಶತ್ರು ಸೈನಿಕರನ್ನು ತನ್ನ ಒನಕೆಯಿಂದಲೇ ಕೊಂದಳು. ಕೊನೆಯಲ್ಲಿ ಎದುರಾಳಿಯು ಬೆನ್ನಹಿಂದೆ ಬಂದದ್ದನ್ನು ಗಮನಿಸಲಾಗದೇ ಶತ್ರುವಿನ ಕತ್ತಿಗೆ ಬಲಿಯಾದಳು. ಅಂದಿನಿಂದ ಅವರು ಒನಕೆ ಓಬವ್ವ ಎಂದು ಪ್ರಸಿದ್ಧಿ ಹೊಂದಿರುತ್ತಾರೆ ಹಾಗೂ ಪ್ರಸ್ತುತ ಆ ಕಿಂಡಿಯನ್ನು ಒನಕೆ ಓಬವ್ವನ ಕಿಂಡಿ ಅಥವಾ ಒನಕೆ ಕಿಂಡಿ ಎಂದು ಕರೆಯಲಾಗುತ್ತದೆ.

ಈ ಹಿನ್ನೆಲೆಯಲ್ಲಿ ಒನಕೆ ಓಬವ್ವ ಜಯಂತಿಯನ್ನು ರಾಜ್ಯಾದ್ಯಂತ ನವೆಂಬರ್ 11ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಚರಿಸಲು ಸರ್ಕಾರವಿ ಆದೇಶಿಸಿದೆ ಎಂದು ಸರ್ಕಾರ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here